ನವದಹೆಲಿ: ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿದ ಇಂದಿಗೆ 22 ವರ್ಷಗಳು ಕಳೆದಿದ್ದು, ದಾಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ಶ್ರದ್ಧಾಂಜಲ್ಲಿ ಸಲ್ಲಿಸಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ನಾಯಕರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ 1 ನಿಮಿಷ ಮೌನಾಚರಣೆ ಮಾಡಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರು ರಾಜ್ಯಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್ ಅವರೊಂದಿಗೆ ಹುತಾತ್ಮ ಯೋಧರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
2001, ಡಿಸೆಂಬರ್ 13ರಂದು ಸಂಸತ್ತಿನ ಎರಡೂ ಕಲಾಪ ಮುಕ್ತಾಯವಾಗಿ 40 ನಿಮಿಷಗಳ ಬಳಿಕ ಸಂಸತ್ ಭವನದ ಮೇಲೆ ಪಾಕ್ ಬೆಂಬಲಿತ ಲಷ್ಕರ್-ಎ-ತೋಯ್ಬಾ ಹಾಗೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು.
ಕಾರಿನಲ್ಲಿ ಸಂಸತ್ ಭವನ ಪ್ರವೇಶಿಸಿದ್ದ ಉಗ್ರರು, ಏಕಾಏಕಿ ಸಂಸತ್ ಆವರಣದಲ್ಲಿ ಗುಂಡಿನ ಮಳೆಗರೆಯಲಾರಂಭಿಸಿದರು. ಈ ದಾಳಿಯನ್ನು ಅತ್ಯಂತ ದಿಟ್ಟತನದಿಂದ ಎದುರಿಸಿದ ಭದ್ರತಾ ಸಿಬ್ಬಂದಿ, ಭಯೋತ್ಪಾದಕರ ದಾಳಿಯನ್ನು ವಿಫಲಗೊಳಿಸಿ ತಮ್ಮ ಪ್ರಾಣವನ್ನು ಅರ್ಪಿಸಿದರು.
ಈ ದಾಳಿಯಲ್ಲಿ ದೆಹಲಿ ಪೊಲೀಸ್ ನ ಏಳು ಪೊಲೀಸರು, ಇಬ್ಬರು ಸಂಸತ್ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಕಾರ್ಮಿಕರು ಹುತಾತ್ಮರಾದರು. ಅಲ್ಲದೇ ದಾಳಿ ಎಸಗಿದ ಐವರೂ ಭಯೋತ್ಪಾದಕರನ್ನು ಸಂಸತ್ ಹೊರಾಂಗಣದಲ್ಲಿ ಹತ್ಯೆ ಮಾಡಲಾಯಿತು.