ನವದೆಹಲಿ: ಸಂಸತ್ ಮೇಲಿನ ದಾಳಿಗೆ ಇಂದಿಗೆ 23 ವರ್ಷಗಳು ತುಂಬಿವೆ. ಸಂಸತ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಗಣ್ಯರಿಗೆ ಶುಕ್ರವಾರ ಹಳೆ ಸಂಸತ್ ಭವನದ ಹೊರಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಕೇಂದ್ರ ಸಚಿವರು ಹಾಗೂ ಸಂಸದರು ಭಾಗಿಯಾಗಿದ್ದರು.
ಕೆಲ ಕಾಲ ಮೌನ ಆಚರಿಸಿದ ನಂತರ ಸಿಐಎಸ್‌ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ಕೂಡ ಗೌರವ ಸಲ್ಲಿಸಿದರು.
2001 ರಲ್ಲಿ ಸಂಸತ್ತಿನ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಅವರ ತ್ಯಾಗವು ನಮ್ಮ ರಾಷ್ಟ್ರವನ್ನು ಸದಾ ಪ್ರೇರೇಪಿಸುತ್ತದೆ. ಅವರ ಧೈರ್ಯ ಮತ್ತು ಸಮರ್ಪಣೆಗಾಗಿ ನಾವು ಕೃತಜ್ಞರಾಗಿರುತ್ತೇವೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಯೋತ್ಪಾದನೆ ವಿರುದ್ಧ ಇಡೀ ದೇಶ ನಿಂತಿದೆ. ರಾಷ್ಟ್ರಕ್ಕಾಗಿ ಅಮರರಾದ ಹುತಾತ್ಮರಿಗೆ ಗೌರವಪೂರ್ವಕ ಶ್ರದ್ಧಾಂಜಲಿ. ಸಂಸತ್ ಭವನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತ ಮಾತೆಯ ಹೆಮ್ಮೆಯ ಪುತ್ರರನ್ನು ಇಂದು ನಾವು ಸ್ಮರಿಸುತ್ತೇವೆ. ಇಡೀ ದೇಶವೇ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿದೆ ಎಂದು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ. ಇಂದಿನ ದಿನವು ಸಂಸತ್ ಭವನದ ಮೇಲಿನ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ದೇಶ ಮತ್ತು ನಮ್ಮ ಪ್ರಜಾಪ್ರಭುತ್ವದ ದೇವಾಲಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ನೆನಪಿಸುತ್ತದೆ. ಅಮರ ಹುತಾತ್ಮರಿಗೆ ಕೋಟಿ ನಮನಗಳು ಎಂದಿದ್ದಾರೆ.
2021ರ ಡಿ.13 ರಂದು ನಡೆದ ಸಂಸತ್ ಭವನದ ಮೇಲಿನ ದಾಳಿಗೆ ಜಗದೀಶ್, ಮತ್ಬರ್, ಕಮಲೇಶ್ ಕುಮಾರಿ; ನಾನಕ್ ಚಂದ್ ಮತ್ತು ರಾಂಪಾಲ್, ಓಂ ಪ್ರಕಾಶ್, ಬಿಜೇಂದರ್ ಸಿಂಗ್ ಮತ್ತು ಘನಶ್ಯಾಮ್, ದೇಶರಾಜ್, ತೋಟಗಾರ ಹುತಾತ್ಮರಾಗಿದ್ದರು.