ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ 230 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಇಂದು ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ ವಿಧೇಯಕದ ಮೇಲೆ ಮಾತನಾಡಿದ ಅವರು, ಅತ್ಯಂತ ಪ್ರಮುಖ ಪ್ರವಾಸೋದ್ಯಮ ತಾಣವಾಗಿರುವ ಸವದತ್ತಿ ಯಲ್ಲಮ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಬರುವ ಭಕ್ತಾದಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು 230 ಕೋಟಿ ರೂ. ಯೋಜನೆಯನ್ನು ರೂಪಿಸಿದ್ದೇವೆ ಎಂದು ಹೇಳಿದರು.
ಸವದತ್ತಿ ಯಲ್ಲಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದೇವೆ. 2026 ರ ಡಿಸೆಂಬರ್‌ನಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ಕೂಡ ರಚಿಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆಯುವುದಾಗಿ ಪಾಟೀಲ್ ಪರಿಷತ್‌ಗೆ ತಿಳಿಸಿದರು.
ಇನ್ನು ಇದೇ ರೀತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪ್ರವಾಸೋದ್ಯಮ ತಾಣವನ್ನು ಅಭಿವೃದ್ಧಿಪಡಿಸಲಾಗುವುದು. ಒಟ್ಟು 11 ಕಡೆ ರೋಪ್ ವೇ (ಕೇಬಲ್ ಕಾರ್) ಅಳವಡಿಕೆ ಮಾಡಲಾಗಿದೆ. ಇದಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಶಕ್ತಿ ಯೋಜನೆ ಬಂದ ಮೇಲೆ ಪ್ರವಾಸೋದ್ಯಮ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆ ದ್ವಿಗುಣವಾಗಿದೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ನಾವು ಕೇವಲ ಲಾಭ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ. ಬದಲಿಗೆ ಮೊದಲು ನಮ ಕನ್ನಡಿಗರು ಮತ್ತು ಮಕ್ಕಳು ಇಲ್ಲಿನ ಸ್ಥಳಗಳನ್ನು ನೋಡಬೇಕು. ಅನೇಕ ಜನರು ನಮಲ್ಲಿರುವ ಸ್ಥಳಗಳನ್ನು ನೋಡಿಲ್ಲ. ಮೊದಲು ಇಲ್ಲಿನ ಜನರು ನೋಡಿದರೆ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.
ಪ್ರವಾಸೋದ್ಯಮದಿಂದ ಬೊಕ್ಕಸಕ್ಕೆ ಶೇ.5 ರಿಂದ 8 ರಷ್ಟು ಲಾಭವಾಗಿರಬಹುದು ಅಷ್ಟೇ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪ್ರವಾಸೋದ್ಯಮ ತಾಣ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಜಂಟಿ ಸಹಭಾಗಿತ್ವ ಯೋಜನೆಯಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ಸಂಪನ್ಮೂಲ ಹೊಂದಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ವಿಧೇಯಕ-2015ಕ್ಕೆ ವಿಧಾನಪರಿಷತ್‌ನಲ್ಲಿ ಅಂಗೀಕಾರ ದೊರೆಯಿತು.ಈ ಹಿಂದೆ ವಿಧಾನಸಭೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ವಿಧೇಯಕ-2015 ಅನ್ನು ಅಂಗೀಕರಿಸಲಾಗಿತ್ತು.