ರಾಮನಗರ : ರಾಮನಗರದಲ್ಲಿ ಮೇ.೩ರ ಸಂಜೆ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲ ಹೊಡೆತಕ್ಕೆ ಜಾನಪದ ಲೋಕದಲ್ಲಿ ಸುಮಾರು ೨೫ ರಿಂದ ೩೦ ಲಕ್ಷ ನಷ್ಟ ಸಂಭವಿಸಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ತಿಳಿಸಿದರು.
ರಾಮನಗರದ ಜಾನಪದ ಲೋಕದಲ್ಲಿ ಗಿರಿಜನ ಲೋಕದಲ್ಲಿ ನಿರ್ಮಿಸಲಾಗಿದ್ದ ಮಲೆಕುಡಿಯರ ಹಾಡಿ ಸಿಡಿಲಿನಿಂದ ಸಂಪೂರ್ಣ ಭಸ್ಮವಾಗಿರುವುದನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು. ಜಾನಪದ ಲೋಕದ ಗಿರಿಜನ ಲೋಕದಲ್ಲಿನ ಮಲೆಕುಡಿಯರ ಹಾಡಿ ಸಿಡಿಲಿನಿಂದ ಸಂಪೂರ್ಣವಾಗಿ ಭಸ್ಮವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಜಾನಪದ ಲೋಕಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಪ್ರಮುಖ ಅಂಗ ಸಂಸ್ಥೆಯಾದ ಜಾನಪದ ಲೋಕ ಈ ವಷದ ಪ್ರಥಮ ಮಳೆಗೆ ಮಳೆಗಿಂತ ಹೆಚ್ಚಾಗಿ ಗುಡುಗು ಸಿಡಿಲು ಆರ್ಭಟದಿಂದ ಸಿಡಿಲಿನಿಂದ ಹೊಡೆತಕ್ಕೆ ಗಿರಿಜನ ಲೋಕದ ಮಲೆಕುಡಿಯರ ಹಾಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಹಾಡಿಯ ಒಳಗಡೆ ಇದ್ದ ಪ್ರತಿಕೃತಿಗಳು, ಛಾಯಚಿತ್ರಗಳು ಸೇರಿದಂತೆ ಹಾಡಿಗೆ ಸಂಬಂಧಿಸಿದ ವಸ್ತುಗಳು, ಹಾಡಿಯ ಕಟ್ಟಡ ಕೂಡ ನಾಶವಾಗಿದೆ ಎಂದರು.
ಇದಲ್ಲದೆ ಸಿಡಿಲಿನ ಹೊಡೆತಕ್ಕೆ ಜಾನಪದ ಲೋಕದಲ್ಲಿನ ಕಂಪ್ಯೂಟರ್‌ಗಳು, ಯು.ಪಿ.ಎಸ್‌ಗಳು ನೀರಿನ ಪಂಪ್‌ಸೆಟ್ ಮೋಟರು ಇವೆಲ್ಲವೂ ಸುಟ್ಟು ಭಸ್ಮವಾಗಿವೆ. ಇದರಿಂದ ನಮಗೆ ೨೫ ರಿಂದ ೩೦ ಲಕ್ಷದಷ್ಟ ನಷ್ಟ ಉಂಟಾಗಿದೆ. ಸಾಂಸ್ಕೃತಿಕ ಸಂಸ್ಥೆ ಜಾನಪದ ಲೋಕವನ್ನು ಬಹಳ ಕಷ್ಟದಿಂದ ನಡೆಸಿಕೊಂಡು ಹೋಗುತ್ತಿದ್ದೇವೆ. ಇಷ್ಟಲ್ಲಾ ದೊಡ್ಡ ನಷ್ಟವಾದಾಗ ನಾವು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ನೆರವನ್ನು ನೀಡಬೇಕು ಎಂದು ತಿಳಿಸಿದರು.