ಕೆ.ಆರ್.ನಗರ: ಪಿಕಾರ್ಡ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ರೈತ ಸದಸ್ಯರಿಗೆ ಹೊಸದಾಗಿ ೨೫೦ ಕೋಟಿ ಸಾಲ ವಿತರಿಸಲಾಗಿದೆ ಎಂದು ಎಸ್‌ಎಲ್‌ಡಿ ಬ್ಯಾಂಕಿನ ಅಧ್ಯಕ್ಷರೂ ಆದ ತಿಪಟೂರು ಕ್ಷೇತ್ರದ ಶಾಸಕ ಷಡಕ್ಷರಿ ಹೇಳಿದರು. ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಇಂದು ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದ ೧೭೮ ಬ್ಯಾಂಕ್‌ಗಳಿಗೆ ಎಸ್‌ಎಲ್‌ಡಿ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ನೀಡಲಾಗಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ವತಿಯಿಂದ ದೀರ್ಘಾವದಿ ಸಾಲ ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದ್ದು ಅಪೆಕ್ಸ್ ಬ್ಯಾಂಕ್‌ಗಿಂತಲೂ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದ ಅಧ್ಯಕ್ಷರು ಕೆ.ಆರ್.ನಗರದ ಬ್ಯಾಂಕ್‌ಗೆ ೧.೫೦ ಕೋಟಿ ಅನುದಾನ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು. ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ವಿಧಾನ ಸಭೆ ಅಧಿವೇಶನದ ಮುನ್ನ ಮುಖ್ಯಮಂತ್ರಿಗಳೊಂದಿಗೆ ಸಹಕಾರ ಇಲಾಖೆ ಸಭೆ ನಡೆಸಿ ರೈತರಿಗೆ ಸಾಲ ಸೌಲಭ್ಯ ಹೆಚ್ಚಿಸಲು ಮತ್ತು ಬ್ಯಾಂಕ್ ಕಟ್ಟಡ ಸೇರಿದಂತೆ ಇತರ ಸೌಕರ್ಯಕ್ಕಾಗಿ ಸರ್ಕಾರ ಹಣ ನೀಡುವಂತೆ ಒತ್ತಾಯಿಸ ಲಾಗುತ್ತದೆ ಎಂದು ಮಾಹಿತಿ ನೀಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಬ್ಯಾಂಕ್ ಆಡಳಿತ ಕಛೇರಿ ನಿರ್ಮಾಣಕ್ಕೆ ೧೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡುವ ದೃಷ್ಠಿಯಿಂದ ಬ್ಯಾಂಕ್ ಆಡಳಿತ ಮಂಡಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು. ಆಡಳಿತ ಮಂಡಳಿಯವರು ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗ ರೈತರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಸಕಾಲದಲ್ಲಿ ಸಾಲ ಸೌಲಭ್ಯ ವಿತರಿಸಬೇಕು ಎಂದು ಸಲಹೆ ನೀಡಿದ ಶಾಸಕರು ದೀರ್ಘವಧಿ ಸಾಲದ ಜತೆಗೆ ವಾಹನಗಳ ಖರೀದಿ ಮಾಡಲು ಹೆಚ್ಚು ಸಾಲ ನೀಡಬೇಕು ಎಂದು ತಿಳಿಸಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಹದೇವ್, ಮಂಡ್ಯ ಜಿಲ್ಲಾ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿಗೌಡ, ಪಿರಿಯಾಪಟ್ಟಣ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಲದಪ್ಪ, ಮಾಜಿ ನಿರ್ದೇಶಕ ಪರಮೇಶ್, ಜಿಲ್ಲಾ ಬ್ಯಾಂಕ್‌ನ ಅಧ್ಯಕ್ಷ ನಾಗರಾಜು, ವ್ಯವಸ್ಥಾಪಕಿ ಬಿ.ಪಿ.ರಶ್ಮಿತಾ, ಸಿಬ್ಬಂದಿ ಉಮೇಶ್, ಕೆ.ಆರ್.ನಗರ ಬ್ಯಾಂಕ್ ಅಧ್ಯಕ್ಷ ಕೆ.ಟಿ.ಚಂದ್ರೇಗೌಡ, ಉಪಾಧ್ಯಕ್ಷ ಸಿದ್ದನಾಯಕ, ನಿರ್ದೇಶಕರಾದ ಬಿ.ಎಸ್.ಚಂದ್ರಹಾಸ, ಎನ್.ಸಿ.ಪ್ರಸಾದ್, ಮಲ್ಲಿಕಾರ್ಜುನ, ಚಂದ್ರಶೇಖರ್, ಸಿ.ಆರ್.ರಮೇಶ್, ಪ್ರೇಮಕುಳ್ಳಬೋರೇಗೌಡ, ಪುಷ್ಪರೇವಣ್ಣ, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಗುತ್ತಿಗೆದಾರ ಮಹದೇವ್, ಬ್ಯಾಂಕ್ ವ್ಯವಸ್ಥಾಪಕಿ ಆರ್.ಎಂ.ಗಾಯತ್ರಮ್ಮ ಮುಂತಾದವರು ಹಾಜರಿದ್ದರು.