ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯರವರು ವರುಣಾಕ್ಷೇತ್ರಕ್ಕೆ ಮೂರು ಸಾವಿರ ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾಕ್ಷೇತ್ರದ ಸುತ್ತೂರಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಡಿಜಿಟಲ್ ಲೈಬ್ರರಿ ಉದ್ಘಾಟಿಸಿ ಮಾತನಾಡಿದ ಅವರು ಕಳೆದ ೫ ವರ್ಷದಲ್ಲಿ ವರುಣಾಕ್ಷೇತ್ರಕ್ಕೆ ಯಾವುದೇ ಅನುದಾನ ಬಂದಿರಲಿಲ್ಲ. ಆದ್ದರಿಂದ ಸಮಸ್ಯೆಗಳು ಹೆಚ್ಚಾಗಿದ್ದು, ಸುತ್ತೂರು ದೊಡ್ಡ ಗ್ರಾಮವಾಗಿರುವುದರಿಂದ ಒಂದಾದ ಮೇಲೊಂದರಂತೆ ಸಮಸ್ಯೆಗಳು ಬರುತ್ತಿವೆ. ವರುಣಾಕ್ಷೇತ್ರದ ಜನ ನನ್ನನ್ನು ಒಂದು ಭಾರಿ ಗೆಲ್ಲಿಸಿದ್ದೀರಿ. ಸಿದ್ದರಾಮಯ್ಯರವರು ೨ ಭಾರಿ ಮುಖ್ಯಮಂತ್ರಿಯಾಗಲು ನೀವು ನೀಡಿದ ಹೆಚ್ಚು ಮತಗಳು ಕಾರಣವಾಗಿದೆ, ಆದ್ದರಿಂದ ಗ್ರಾಮದ ಜನತೆಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ಸುತ್ತೂರು ಗ್ರಾಮದ ಆಸ್ಪತ್ರೆ ಅಪಗ್ರೇಡ್ ಮಾಡಬೇಕು, ಆಂಬ್ಯುಲೆನ್ಸ್ ಬೇಕು, ಖಾಯಂ ವೈದ್ಯರು ಬೇಕು, ಫ್ರೌಡಶಾಲೆ ಮತ್ತು ಪದವಿ ಪೂರ್ವ ಕಾಲೇಜು ಬೇಕು, ನಿವೇಶನ ಬೇಕು, ಗ್ರಂಥಾಲಯಕ್ಕೆ ಹೊಸ ಕಟ್ಟಡ ಬೇಕು, ಹುಲ್ಲಹಳ್ಳಿ ನಾಲೆಗೆ ತಡೆಗೋಡೆ ನಿರ್ಮಿಸಬೇಕು, ಚರಂಡಿ ರಸ್ತೆ ಅಭಿವೃದ್ಧಿ, ಕಾಂಕ್ರೀಟ್ ರಸ್ತೆ, ಸ್ಮಶಾನ ರಸ್ತೆ ಅಭಿವೃದ್ಧಿ, ಮಡಿವಾಳ ಜನಾಂಗಕ್ಕೆ ಸಮುದಾಯ ಭವನ ಬೇಕು ಎಂದು ಸಮಸ್ಯೆಗಳ ಪಟ್ಟಿ ನೀಡಿದ್ದೀರಿ.
ಈ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುತೇನೆ ಎಂದ ಅವರು, ಸುತ್ತೂರಿನಿಂದ ಜೀಮಾರಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ೨.೯೨ ಕೋಟಿ ಮಂಜೂರಾಗಿದ್ದು ಇಂದು ಗುದ್ದಲಿ ಪೂಜೆ ಮಾಡಲಿದ್ದೇವೆ ಎಂದರು. ಸಮಾರಂಭದಲ್ಲಿ ರಾಜ್ಯ ವಾಲ್ಮಿಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಗ್ರಾ.ಪಂ. ಅಧ್ಯಕ್ಷ ರವಿ, ಉಪಾಧ್ಯಕ್ಷೆ ರಾಣಿ, ಮುಖ್ಯಮಂತ್ರಿಗಳಾದ ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ಮುಖಂಡರಾದ ರಂಗಸ್ವಾಮಿ, ರವಿ, ಮಹೇಶ್, ಸೋಮಣ್ಣ, ಶಿವರಾಜಪ್ಪ, ರಾಜು, ಮಾಳೀಗೆ ನಾಯ್ಕ, ಶಿವಣ್ಣ ನಾಯ್ಕ, ಮಾದೇಗೌಡ, ಇಒ ರಾಜೇಶ್ ಜೆರಾಲ್ಡ್, ಪಿಡಿಒ ಮಲ್ಕುಂಡಿ ಮಾದೇವಸ್ವಾಮಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.