Friday, April 18, 2025
Google search engine

Homeರಾಜ್ಯಸುದ್ದಿಜಾಲನೀರು ಸರಬರಾಜುಗಾಗಿ ಅಮೃತ್ ಯೋಜನೆ ಅಡಿಯಲ್ಲಿ ೩೦ ಕೋಟಿ ಮಂಜೂರು, ಶೀಘ್ರವೇ ಕಾಮಗಾರಿಗೆ ಚಾಲನೆ-ಶಾಸಕ ಡಿ.ರವಿಶಂಕರ್

ನೀರು ಸರಬರಾಜುಗಾಗಿ ಅಮೃತ್ ಯೋಜನೆ ಅಡಿಯಲ್ಲಿ ೩೦ ಕೋಟಿ ಮಂಜೂರು, ಶೀಘ್ರವೇ ಕಾಮಗಾರಿಗೆ ಚಾಲನೆ-ಶಾಸಕ ಡಿ.ರವಿಶಂಕರ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕೆ.ಆರ್.ನಗರ ಪಟ್ಟಣದ ಜನತೆಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಪುರಸಭೆಗೆ ಅಮೃತ್ ಯೋಜನೆಯಡಿಯಲ್ಲಿ ೩೦ ಕೋಟಿ ರೂ ಮಂಜೂರು ಮಾಡಿಸಲಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಇಲ್ಲಿನ ಮಧುವನಹಳ್ಳಿ ಬಡಾವಣೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈಗಿರುವ ೬ ಓವರ್ ಹೆಡ್ ಟ್ಯಾಂಕ್‌ಗಳ ಜತೆಗೆ ಹೊಸದಾಗಿ ೪ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಿ, ಕಾವೇರಿ ನದಿಯಿಂದ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಮತ್ತೊಂದು ಪೈಪ್‌ಲೈನ್ ಮಾಡಲಾಗುತ್ತದೆ ಎಂದರು.

ಇದರಿಂದ ಪುರಸಭೆ ವ್ಯಾಪ್ತಿಯ ಜನತೆಗೆ ಸಾಕಷ್ಟು ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ ಶಾಸಕರು ಹೊಸ ಬಡಾವಣೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಲು ಒಳಚರಂಡಿ ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ೨೦ ಕೋಟಿ ರೂಗಳನ್ನು ಮಂಜೂರು ಮಾಡಿಸಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ತಲಾ ೨೦ ಲಕ್ಷ ರೂಗಳಲ್ಲಿ ಸುಭಾಷ್‌ನಗರ, ಮಧುವನಹಳ್ಳಿ ಬಡಾವಣೆ, ಕುವೆಂಪು ಬಡಾವಣೆ, ಆದಿಶಕ್ತಿ ಬಡಾವಣೆ, ವಿಜಯನಗರ ಬಡಾವಣೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮತ್ತು ನಿಯಮಾನುಸಾರ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸೂಚಿಸಿದ ಶಾಸಕ ಡಿ.ರವಿಶಂಕರ್ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸಿಡಿಪಿಒ ಅವರು ಸ್ಥಳಕ್ಕೆ ಭೇಟಿ ನೀಡಿದ ಕಟ್ಟಡದ ಕಾಮಗಾರಿ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಸ್ತೂರು ಬಳಿ ಏತ ನೀರಾವರಿ ಯೋಜನೆಗೆ ಘೋಷಿಸಿದ್ದ ೫೦ ಕೋಟಿ ರೂಗಳನ್ನು ೬೦ ಕೋಟಿಗೆ ಏರಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಜಲ ಸಂಪನ್ಮೂಲ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಕಾಮಗಾರಿಗೆ ಚಾಲನೆ ಕೊಡಿಸಲಾಗುತ್ತದೆ ಎಂದು ಹೇಳಿದ ಅವರು ಈ ಯೋಜನೆಯಿಂದ ಕೆಸ್ತೂರು, ಸಿದ್ದಾಪುರ, ಮಾವತ್ತೂರು, ಬ್ಯಾಡರಹಳ್ಳಿ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಆನಂತರ ೩೦ ಲಕ್ಷ ರೂಗಳಲ್ಲಿ ರೇಷ್ಮೆ ಹುಳು ಉತ್ಪಾದನೆ ಕೇಂದ್ರ ಕಟ್ಟಡ ಕಾಂಪೌoಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕ ಸೈಯದ್‌ಜಾಬೀರ್, ಪುರಸಭೆ ಸದಸ್ಯರಾದ ಸೌಮ್ಯಲೋಕೇಶ್, ನಟರಾಜು, ಶಂಕರ್, ಸೈಯದ್‌ಸಿದ್ದಿಕ್, ಮಾಜಿ ಅಧ್ಯಕ್ಷ ನರಸಿಂಹರಾಜು, ಮಾಜಿ ಸದಸ್ಯ ವಿಜಯಕುಮಾರ್, ಕೆ.ವಿನಯ್, ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಮುಖಂಡರಾದ ನಾಗರಾಜು, ನವೀದ್‌ಅಹಮದ್, ಉಮೇಶ್, ಕಾಳಿಕುಮಾರ್, ಆದರ್ಶ, ಮಹದೇವ್, ಮಂಜುನಾಥ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular