Sunday, April 20, 2025
Google search engine

Homeರಾಜಕೀಯಲೋಕಸಭಾ ಚುನಾವಣೆ ಅನಂತರ ವಿಪಕ್ಷಗಳ 30 ಶಾಸಕರು ಕಾಂಗ್ರೆಸ್‌ ಗೆ ಬರಲು ಕಾಯುತ್ತಿದ್ದಾರೆ: ಡಿ.ಕೆ. ಶಿವಕುಮಾರ್‌

ಲೋಕಸಭಾ ಚುನಾವಣೆ ಅನಂತರ ವಿಪಕ್ಷಗಳ 30 ಶಾಸಕರು ಕಾಂಗ್ರೆಸ್‌ ಗೆ ಬರಲು ಕಾಯುತ್ತಿದ್ದಾರೆ: ಡಿ.ಕೆ. ಶಿವಕುಮಾರ್‌

ಬೆಂಗಳೂರು: ಲೋಕಸಭಾ ಚುನಾವಣೆಯ ಅನಂತರ ಸರಕಾರ ಪತನ ಆಗುವುದಿಲ್ಲ. ಬದಲಾಗಿ ಹಾಗೆ ಹೇಳುತ್ತಿರುವ ವಿಪಕ್ಷಗಳ 30 ಶಾಸಕರು ಯಾವುದೇ ಘಳಿಗೆಯಲ್ಲಿ ಕಾಂಗ್ರೆಸ್‌ ಗೆ ಬರಲು ಕಾಯುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಎರಡನೇ ಹಂತದ ಲೋಕ ಸಭಾ ಚುನಾವಣೆ ನಡೆಯಲಿರುವ ಕ್ಷೇತ್ರಗಳ ನಾಯಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿಯ 17 ಮತ್ತು ಜೆಡಿಎಸ್‌ನ 13 ಶಾಸಕರು ಕಾಂಗ್ರೆಸ್‌ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಹಸುರು ನಿಶಾನೆ ನೀಡಿದ 24 ತಾಸುಗಳಲ್ಲಿ ಅವರೆಲ್ಲರೂ ನಮ್ಮ ತೆಕ್ಕೆಗೆ ಬರಲಿದ್ದಾರೆ. ಚುನಾವಣೆ ಅನಂತರ ಅದಕ್ಕೆ ಕೈ ಹಾಕೋಣ ಎಂದು ನಾವೇ ಸುಮ್ಮನಿದ್ದೇವೆ. ಲೋಕಸಭಾ ಚುನಾವಣೆಯ ಅನಂತರ ಸರಕಾರ ಬೀಳಲಿದೆ ಎಂಬುದು ಹಸಿ ಸುಳ್ಳು. ಹಾಗಾಗಿ ಅನಿಶ್ಚಿತತೆಯ ಆತಂಕದಲ್ಲಿ ಯಾರೂ ಕೆಲಸ ಮಾಡಬೇಕಿಲ್ಲ. ನಿಶ್ಚಿಂತೆಯಿಂದ ಪಕ್ಷದ ಗೆಲುವಿಗಾಗಿ ಶ್ರಮಿಸಿ ಎಂದು ಡಿಸಿಎಂ ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾವುದೇ ಕಾರಣಕ್ಕೂ ಯಾರಿಂದಲೂ ಈ ಸರಕಾರವನ್ನು ಅಲ್ಲಾಡಿಸಲಾಗುವುದಿಲ್ಲ. ಬದಲಿಗೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಶಾಸಕರು ಕಾಂಗ್ರೆಸ್‌ ಸೇರುವುದರಿಂದ ಸರಕಾರ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಹೇಳಿದರು ಎನ್ನಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ 20ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಚುನಾವಣೆ ಪೂರ್ವದಲ್ಲಿ ನಡೆಸಲಾಗಿರುವ ಹಲವು ಸಮೀಕ್ಷೆಗಳು ಹೇಳಿವೆ. ಇದರಿಂದ ಕಾಂಗ್ರೆಸ್‌ ಪರ ಅಲೆ ಇರುವುದು ಸ್ಪಷ್ಟ. ಆದ್ದರಿಂದ ಅಲ್ಲಲ್ಲಿ ಇರುವ ಮುನಿಸು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಕಳೆದ ಒಂದು ವರ್ಷದಲ್ಲಿ ಐದು ಪ್ರಮುಖ ಗ್ಯಾರಂಟಿಗಳನ್ನು ಸರಕಾರ ಈಡೇರಿಸಿದೆ. ಇದರಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳೇ ಹೆಚ್ಚಿವೆ. ಮನೆ-ಮನೆಗೆ ಸರಕಾರದ ಸಾಧನೆಗಳನ್ನು ತಲುಪಿಸಬೇಕು. ಭಾವನಾತ್ಮಕ ವಿಷಯಗಳಿಂದ ಚುನಾವಣೆ ಎದುರಿಸಲು ಹೊರಟ ಮೈತ್ರಿ ಪಕ್ಷಗಳ ವೈಫ‌ಲ್ಯಗಳನ್ನು ಕೂಡ ಅಷ್ಟೇ ಪರಿಣಾಮಕಾರಿಯಾಗಿ ತಲುಪಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular