ಮಂಡ್ಯ: ಮಂಡ್ಯ ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ವಿಶ್ವವಿದ್ಯಾಲಯದ ಗೊಂದಲಕ್ಕೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ.
ವಿಶ್ವವಿದ್ಯಾಲಯದ ಗೊಂದಲದಿಂದಾಗಿ ಗ್ರಂಥಾಲಯ, ಕಚೇರಿಗೆ ಬೀಗ ಜಡಿಯಲಾಗಿದ್ದು, ಗ್ರಂಥಾಲಯದಲ್ಲಿ ಓದಲಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿದ್ದರು ಬೋಧಕೇತರ ಸಿಬ್ಬಂದಿಗೆ ಮಂಡ್ಯ ವಿವಿ ಕಳೆದ ಐದಾರು ತಿಂಗಳಿಂದ ವೇತನ ನೀಡಿಲ್ಲ. ಇದರಿಂದಾಗಿ ಸಿಬ್ಬಂದಿಗಳು ಕಷ್ಟಪಡುವಂತಾಗಿದೆ.
ಈ ಹಿಂದೆ ಸರ್.ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು. ಇದೀಗ ಮಂಡ್ಯ ವಿಶ್ವವಿದ್ಯಾಲಯಕ್ಕೆ ಕೇಂದ್ರವನ್ನು ಹಸ್ತಾಂತರಿಸಲಾಗಿದೆ. ಎರಡೂ ವಿವಿಯ ಜಂಜಾಟದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಬಡವಾಗಿದ್ದಾರೆ.
ಮಂಡ್ಯ ವಿವಿಯವರನ್ನ ಕೇಳಿದ್ರೆ ಮೈಸೂರು ವಿವಿ ಮೇಲೆ, ಮೈಸೂರು ವಿವಿಯವರನ್ನ ಕೇಳಿದ್ರೆ ಮಂಡ್ಯದವರ ಮೇಲೆ ಸಬೂಬು ಹೇಳುತ್ತಿದ್ದಾರೆ. ಇತ್ತ ಸಂಬಳವೂ ಇಲ್ಲ, ಕೆಲಸವೂ ಇಲ್ಲದೇ 32 ಸಿಬ್ಬಂದಿ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಹಲವು ಬಾರಿ ಕುಲಪತಿಗಳಿಗೆ ಮನವಿ ಕೊಟ್ಟರು ಸಮಸ್ಯೆ ಬಗೆಹರಿದಿಲ್ಲ. ಕೇಂದ್ರದ ನಿರ್ದೇಶಕರನ್ನ ಹುದ್ದೆಯಿಂದ ಸರ್ಕಾರ ಏಕಾಏಕಿ ಬಿಡುಗಡೆ ಮಾಡಿದೆ. ತೆರವಾದ ಸ್ಥಾನಕ್ಕೆ ಬೇರೊಬ್ಬರನ್ನ ನೇಮಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಿರ್ದೇಶಕರ ಹುದ್ದೆಯಿಂದ ಬಿಡುಗಡೆ ಆಗುತ್ತಿದ್ದಂತೆ ಗ್ರಂಥಾಲಯ, ಕಚೇರಿಗೆ ಬೀಗ ಹಾಕಲಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಹಾಜರಾತಿ ಪುಸ್ತಕವೂ ಕೊಡ್ತಿಲ್ಲ, ಕೆಲಸವನ್ನೂ ಕೊಡದೆ ನಿರ್ಲಕ್ಷ್ಯ ಮಾಡಲಾಗಿದೆ.
ನಿತ್ಯವೂ ಕಚೇರಿಗೆ ಬಂದು ಸಿಬ್ಬಂದಿಗಳು ಬಾಗಿಲಲ್ಲೇ ಕೂರುತ್ತಿದ್ದಾರೆ. ಟೀಚಿಂಗ್ ಅಂಡ್ ನಾನ್ ಟೀಚಿಂಗ್ ಸ್ಟಾಫ್ ಸಮಸ್ಯೆಗಳನ್ನ ಕುಲಪತಿಗಳು ಕೇಳುತ್ತಿಲ್ಲ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ.
ಸಂಬಳ ಇಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಹಲವು ಬಾರಿ ಮನವಿ ಕೊಟ್ಟರು ನಮಗೆ ನ್ಯಾಯ ಸಿಗುತ್ತಿಲ್ಲ. ತಕ್ಷಣವೇ ಸಮಸ್ಯೆ ಬಗೆಹರಿಸಿ ನ್ಯಾಯ ಸಿಗುವಂತೆ ಮಾಡಿ ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.
ಗ್ರಂಥಾಲಯ ತೆರೆದು ಸಮಸ್ಯೆಗಳ ಸರಿಪಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.