ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ೪.೨ ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಬಾರಾಮುಲ್ಲಾ ಪ್ರದೇಶದಲ್ಲಿ ಇಂದು ಶುಕ್ರವಾರ ಮಧ್ಯಾಹ್ನ ೧೨.೨೬ರ ಸುಮಾರಿಗೆ ಸಂಭವಿಸಿರುವ ಭೂಕಂಪಕ್ಕೆ ಜನ ಬೆಚ್ಚಿ ಬಿದ್ದಿದ್ದು, ಭೂಮಿ ಕಂಪಿಸಿದ ಅನುಭವವಾಗುತ್ತಲೇ ಜನ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಘಟನೆ ನಡೆದ ಕೆಲ ಗಂಟೆಗಳ ಬಳಿಕವೇ ಜನರು ಮನೆಗೆ ಹೋಗಿದ್ದಾರೆ.
ಭೂಕಂಪದಿಂದಾಗಿ ಪ್ರಾಣಾಪಾಯ ಸೇರಿ ಯಾವುದೇ ದುರಂತ ಸಂಭವಿಸಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಭೂಕಂಪ ಸಂಭವಿಸಿದ ವೇಳೆ ಜನರ ಮನೆಗಳಲ್ಲಿರುವ ಫ್ಯಾನ್ ಹಾಗೂ ಮೇಜುಗಳು ಅಲುಗಾಡಿದ ಕಾರಣ ಜನ ಕೂಡಲೇ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಭೂಮಿಯ ೧೦ ಕಿಲೋಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.