ನವದೆಹಲಿ: ಹೊಸ ಸಂಸತ್ ಭವನದಲ್ಲಿ ಕಲಾಪ ನಡೆಯುವ ವೇಳೆ ಭದ್ರತೆ ಉಲ್ಲಂಘಿಸಿ ನುಗ್ಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ೪ ಆರೋಪಿಗಳನ್ನು ದೆಹಲಿ ನ್ಯಾಯಾಲಯವು ೭ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಆರೋಪಿಗಳಾದ ಮನೋರಂಜನ್. ಡಿ, ಅಮೋಲ್ ಶಿಂದೆ, ಸಾಗರ್ ಶರ್ಮಾ ಮತ್ತು ನೀಲಂ ದೇವಿ ಅವರನ್ನು ಎನ್‌ಐಎ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆಗಾಗಿ ಆರೋಪಿಗಳನ್ನು ೧೫ ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ಕೋರಿದ್ದರು. ಆದರೆ, ನ್ಯಾಯಾಲಯ ೭ ದಿನಗಳ ಕಾಲ ಮಾತ್ರ ಕಸ್ಟಡಿಗೆ ನೀಡಿದೆ. ಭಯೋತ್ಪಾದನೆ ನಿಗ್ರಹ ಕಾನೂನು ಯುಎಪಿಎ, ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಪ್ರಮುಖ ಭದ್ರತಾ ವೈಫಲ್ಯದಲ್ಲಿ ಬುಧವಾರ ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಜಿಗಿದ ಇಬ್ಬರು ಯುವಕರು ಹಳದಿ ಬಣ್ಣದ ಹೊಗೆ ಹಾರಿಸಿದ್ದರು. ಸಂಸತ್ತಿನ ಹೊರಗೂ ಪ್ರತಿಭಟನೆ ನಡೆಸಿ ಬಣ್ಣದ ಹೊಗೆ ಸಿಂಪಡಿಸಿದ್ದ ಮತ್ತಿಬ್ಬರೂ ಸೇರಿ ನಾಲ್ವರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು. ಸಾಗರ್, ಮನೋರಂಜನ್, ಅಮೋಲ್ ಮತ್ತು ನೀಲಂ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದ್ದು, ಅವರ ಜೊತೆ ಕೈಜೋಡಿಸಿದ್ದ ಮತ್ತೊಬ್ಬ ಆರೋಪಿ ವಿಶಾಲ್‌ನನ್ನು ಬಳಿಕ ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿಗಳು ಸಂಸತ್ತಿಗೆ ಬರುವ ಮೊದಲು ವಿಶಾಲ್ ಅವರ ಗುರುಗ್ರಾಮದ ಮನೆಯಲ್ಲೇ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
೫ನೇ ಆರೋಪಿ ಲಲಿತ್ ಝಾ ರಾಜಸ್ಥಾನದಲ್ಲಿ ಪತ್ತೆ!: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ೫ನೇ ಆರೋಪಿ ಲಲಿತ್ ಝಾ ರಾಜಸ್ಥಾನದಲ್ಲಿ ಕೊನೆಯದಾಗಿ ಪತ್ತೆಯಾಗಿದ್ದ ಎಂದು ತಿಳಿದುಬಂದಿದೆ. ಲಲಿತ್ ಝಾ ಜಾಡು ಕೊನೆಗೂ ಪತ್ತೆಯಾಗಿದ್ದು, ಕೊನೆಯದಾಗಿ ಆತ ರಾಜಸ್ಥಾನದ ನೀಮ್ರಾನಾದಲ್ಲಿ ಪತ್ತೆಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಕರ್ನಾಟಕ ಮೂಲದ ಆರೋಪಿ ಸೇರಿದಂತೆ ಪ್ರಕರಣದಲ್ಲಿ ಇದುವರೆಗೆ ಐದು ಮಂದಿಯನ್ನು ಬಂಧಿಸಲಾಗಿದ್ದು, ಈ ಪೈಕಿ ವಿಕ್ಕಿ ಮತ್ತು ಆತನ ಪತ್ನಿ ಎಂದು ಗುರುತಿಸಲಾಗಿರುವ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಪ್ರಕರಣದ ನೇತೃತ್ವ ವಹಿಸಿದ್ದರು. ಲಲಿತ್ ಝಾ ಮತ್ತು ಇತರರು ಘಟನೆಯಲ್ಲಿ ಭಾಗಿಯಾಗಿರುವ ಇತರರಿಗೆ ಪಾಸ್ ವ್ಯವಸ್ಥೆ ಮಾಡಿದ್ದರು. ಘಟನೆಗೆ ಮುಂಚಿತವಾಗಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಎಲ್ಲಾ ಆರೋಪಿಗಳು ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಸಾಮಾಜಿಕ ಮಾಧ್ಯಮ ಪೇಜ್ ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಉಲ್ಲೇಖಿಸಿವೆ.