ಬೆಂಗಳೂರು: ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ನೆನ್ನೆ ಸದ್ದು ಮಾಡಿದ್ದ ೪೦ ಪರ್ಸೆಂಟ್ ಕಮಿಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ಗುರುವಾರ ಬಿಜೆಪಿ ಮತ್ತು ಹಾಲಿ ಸರ್ಕಾರದ ವಿರುದ್ಧ ೬ ಸಾವಿರ ಪುಟಗಳ ಭ್ರಷ್ಟಾಚಾರದ ದಾಖಲೆಯನ್ನು ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಸಮಿತಿಗೆ ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋ ಸೇರಿದಂತೆ ೬ ಸಾವಿರ ಪುಟಗಳ ದಾಖಲೆಗಳನ್ನು ಕೆಂಪಣ್ಣ ಅವರು ಲೋಕೋಪಯೋಗಿ ಇಲಾಖೆ ಕಚೇರಿಗೆ ಸಲ್ಲಿಸಿದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೀರಾವರಿ, ಕೃಷಿ, ಜಲಸಂಪನ್ಮೂಲ, ಆರೋಗ್ಯ ಇಲಾಖೆ ಸೇರಿ ಇತರೆ ಇಲಾಖೆಗಳ ಭ್ರಷ್ಟಾಚಾರದ ದಾಖಲೆಗಳನ್ನು ನೀಡಲಾಗಿದೆ. ಹಿರಿತನ ಆಧಾರದಲ್ಲಿ ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ. ಕಮಿಷನ್ ನೀಡಿದವರಿಗೆ ಮಾತ್ರ ಬಾಕಿ ಹಣ ಪಾವತಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ ಅವರು, ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ, ಹಾಲಿ ಸರ್ಕಾರದ ವಿರುದ್ಧ ದಾಖಲೆಗಳನ್ನು ಸಲ್ಲಿಸಿದ್ದೇನೆ. ಎಲ್ಲಾ ಇಲಾಖೆಯ ಕಾಮಗಾರಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಿದ್ದೇನೆ. ಎಲ್ಲಾ ಜಿಲ್ಲೆಗಳ ಕಾಮಗಾರಿ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು. ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿದಾರರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಾಕಿ ಇರುವ ಬಿಲ್ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಮನವಿಗೆ ಕಿವಿಗೊಡದ ಕಾಂಗ್ರೆಸ್ ಸರ್ಕಾರ ವಿರುದ್ಧ ಗುತ್ತಿಗೆದಾರರು ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.