ಮೈಸೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ಮೈಸೂರಿನ ಮೂಡಾ ದಲ್ಲಿ ೪೦೦ ಕೋಟಿ ರೂ. ಹಗರಣ ನಡೆದಿದ್ದು, ಎಸ್‌ಐಟಿ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಶಾಸಕ ಕೆ.ಹರೀಶ್‌ಗೌಡ ಒತ್ತಾಯಿಸಿದರು.
ಮೂಡಾದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈ ಹಗರಣದಲ್ಲಿ ಮೂಡಾ ಆಡಳಿತ ಮಂಡಳಿ, ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳು ಶಾಮಿಲಾಗಿದ್ದು, ರಾಜಕಾರಣಿಗಳ ಹಸ್ತಕ್ಷೇಪದ ಬಗ್ಗೆ ತನಿಖೆಯ ನಂತರ ಗೊತ್ತಾಗಲಿದೆ ಎಂದರು. ಮೂಡಾಕ್ಕೆ ಸೇರಿದ ಕೊಟ್ಯಾಂತರ ರೂ. ಬೆಲೆಬಾಳುವ ನಿವೇಶನಗಳು ಅಕ್ರಮವಾಗಿ ಪರಭಾರೆಯಾಗಿವೆ. ಇವೆಲ್ಲವೂ ವಾಪಸ್ ಪಡೆಯುವ ತನಕ ನಮ್ಮ ಹೋರಾಟ ನಡೆಯುತ್ತದೆ ಎಂದು ಹರೀಶ್‌ಗೌಡ ಹೇಳಿದರು.
ಮಾರ್ಚ್ ೨೦೨೩ ರಂದು ಅಕ್ರಮ ಪರಭಾರೆ ರೆಸ್ಯೂಲೇಷನ್ ಆಗಿದೆ. ಅಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲಿಲ್ಲ. ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಜತೆಗೆ ಮೂಡಾ ಅಧ್ಯಕ್ಷರೂ ಬಿಜೆಪಿಗೆ ಸೇರಿದ್ದರು. ಅವರ ಕಾಲದಲ್ಲೇ ಈ ಭ್ರಷ್ಟಾಚಾರ, ಅಕ್ರಮ ಪರಭಾರೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕ ದರ್ಶನ್ ದ್ರುವನಾರಾಯಣ ಮತ್ತಿತರರು ಇದ್ದರು.