ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ರೂಪಾಯಿ ದಲಿತರ ಹಣವನ್ನು ಗುಳುಂ ಮಾಡಿರುವ ಸಿದ್ಧ ಹಸ್ತರು ಈಗ ಮೈಸೂರಿನ ಮುಡಾದಲ್ಲಿ ೪,೦೦೦ ಕೋಟಿ ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಕೈಚಳಕ ಪ್ರದರ್ಶನ ಮಾಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್,ಅಶೋಕ್ ಆರೋಪಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಗೋಲ್ಮಾಲ್ ಸಿಎಂ ಸಿದ್ದರಾಮಯ್ಯ ನವರೇ, ನನ್ನ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ ಎಂದು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಗೋಲ್ಮಾಲ್ ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ಧರ್ಮ ಪತ್ನಿ ಅವರ ಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆ ಆಗಿರುವ ಸುದ್ದಿ ಹೊರಬಂದಿದೆಯಲ್ಲ ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ? ಆರೋಪ ಕೇಳಿಬಂದಿರುವ ಮುಡಾ ಅಧಿಕಾರಿಗಳನ್ನ ಅಮಾನತು ಮಾಡದೆ, ಕೇವಲ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದೀರಲ್ಲ, ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ?
೪,೦೦೦ ಕೋಟಿ ರೂಪಾಯಿ ಮೌಲ್ಯದ ಈ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನ ಅಸಲಿಗೆ ಸಿಬಿಐಗೆ ವಹಿಸಬೇಕು ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗಕ್ಕೆ ನೀಡಬೇಕು. ಅದು ಬಿಟ್ಟು ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನ ನೇಮಿಸಿ ಪ್ರಕರಣವನ್ನ ಮುಚ್ಚಿಹಾಕಲು ಹೊರಟಿದ್ದೀರಲ್ಲ ಈ ಹಗರಣದಲ್ಲಿ ತಮ್ಮ ಪಾಲೆಷ್ಟು? ಎಂದು ಆರ್ ಅಶೋಕ ವಾಗ್ದಾಳಿ ನಡೆಸಿದ್ದಾರೆ.