Saturday, April 12, 2025
Google search engine

Homeರಾಜ್ಯಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48-60 ಸಾವಿರ ರೂ.ಸೌಲಭ್ಯ : ಸಿಎಂ...

ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48-60 ಸಾವಿರ ರೂ.ಸೌಲಭ್ಯ : ಸಿಎಂ ಸಿದ್ದರಾಮಯ್ಯ

ಕಲಬುರಗಿ : ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ ೪೮ ರಿಂದ ೬೦ ಸಾವಿರ ರೂ. ಸೌಲಭ್ಯ ಲಭಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ ೪೮ ರಿಂದ ೬೦ ಸಾವಿರ ರೂ. ಸೌಲಭ್ಯ ಲಭಿಸಲಿದೆ.

ಜಾತಿ-ಧರ್ಮ ಇಲ್ಲದೆ ಪ್ರತಿಯೊಬ್ಬರನ್ನು ಆರ್ಥಿಕವಾಗಿ ಸುಸ್ಥಿರವಾಗಿರಿಸಲು ಹಾಕಿಕೊಂಡಿರುವ ಈ ಯೋಜನೆಗಳು ಬಡವರ ಬದುಕನ್ನೆ ಬದಲಿಸುವ ಕರ್ನಾಟಕ ಮಾದರಿ ಆಡಳಿತದ ಗ್ಯಾರಂಟಿ ಯೋಜನೆಗಳಾಗಿ ಪರಿವರ್ತನೆಗೊಂಡಿರುವುದಕ್ಕೆ ಸಂತೃಪ್ತಿ ಭಾವ ನನ್ನಲ್ಲಿ ಮೂಡಿದೆ.

ಶಕ್ತಿ ಯೋಜನೆಯಡಿ ಪ್ರತಿ ದಿನ ೫೦ ರಿಂದ ೬೦ ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು, ವಾರ್ಷಿಕವಾಗಿ ಸರ್ಕಾರವು ಇದಕ್ಕಾಗಿ ೪,೦೦೦ ಕೋಟಿ ರೂ. ವೆಚ್ಚ ಮಾಡಲಿದೆ. ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳಲ್ಲಿ ಆಗಸ್ಟ್-೨೦೨೪ರ ಅಂತ್ಯಕ್ಕೆ ದಿನನಿತ್ಯ ೧೭.೧೧ ಲಕ್ಷದಂತೆ ೪೧.೪೫ ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಇದರ ವೆಚ್ಚ ೧,೩೮೭ ಕೋಟಿ ರೂ. ಗಳನ್ನು ನಮ್ಮ ಸರ್ಕಾರ ಭರಿಸುತ್ತಿದೆ.

ಅನ್ನ ಭಾಗ್ಯ ಯೋಜನೆಯಡಿ ೧೦ ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದೆ. ಇದರಲ್ಲಿ ೫ ಕೆ.ಜಿ ಅಕ್ಕಿಯ ಬದಲು ಪ್ರತಿ ಕೆ.ಜಿ.ಗೆ ೩೪ ರೂ. ಗಳಂತೆ ತಲಾ ಸದಸ್ಯರಿಗೆ ೧೭೦ ರೂ. ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗುತ್ತಿದೆ. ಪ್ರದೇಶದ ೭ ಜಿಲ್ಲೆಗಳಲ್ಲಿ ಕಳೆದ ಜೂನ್-೨೦೨೪ ಮಾಹೆಗೆ ಒಟ್ಟು ೨೨.೫೯ ಲಕ್ಷ ಪಡಿತರ ಚೀಟಿಯ ಕುಟುಂಬದ ಸದಸ್ಯರಿಗೆ ೧,೫೫೧ ಕೋಟಿ ರೂ. ಹಣ ಪಾವತಿಸಿದೆ.

೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ ೨೧.೮೮ ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡು ಯೋಜನೆಯ ಲಾಭ ಪಡೆದಿದ್ದಾರೆ. ಇದಕ್ಕಾಗಿ ಸರ್ಕಾರ ೧,೧೦೪ ಕೋಟಿ ರೂ. ಜೆಸ್ಕಾಂಗೆ ಸಬ್ಸಿಡಿ ಪಾವತಿಸಿದೆ.

ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ ೨,೦೦೦ ರೂ. ಒದಗಿಸುವ ಗೃಹ ಲಕ್ಷ್ಮಿ ಯೋಜನೆಯಡಿ ಕಲಬುರಗಿ ವಿಭಾಗದ ೭ ಜಿಲ್ಲೆಗಳಲ್ಲಿ ಇದುವರೆಗೆ ೨೪.೫೩ ಲಕ್ಷ ಮಹಿಳೆಯರಿಗೆ ತಲಾ ೨,೦೦೦ ರೂ. ಗಳಂತೆ ೫೦೦೦ ಕೋಟಿ ರೂ. ಗಳನ್ನು ಡಿ.ಬಿ.ಟಿ. ಮೂಲಕ ಪಾವತಿಸಿದೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದಂತಾಗಿದೆ.

೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಮತ್ತು ಪದವಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಕ್ರಮವಾಗಿ ಮಾಸಿಕ ೧,೫೦೦ ಮತ್ತು ೩,೦೦೦ ಭತ್ಯೆ ನೀಡುವ ಯುವ ನಿಧಿ ಯೋಜನೆಯಡಿ ಇದೂವರೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ೪೯,೬೯೧ ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹ ೨೨,೨೭೨ ನಿರುದ್ಯೋಗಿಗಳಿಗೆ ೨೮.೩೯ ಕೋಟಿ ರೂ.ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular