Friday, April 11, 2025
Google search engine

Homeರಾಜ್ಯಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ 5 ಗ್ಯಾರಂಟಿ ಕೊಟ್ಟು, ಪ್ರಾರಂಭ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ 5 ಗ್ಯಾರಂಟಿ ಕೊಟ್ಟು, ಪ್ರಾರಂಭ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ: ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಇದನ್ನು ಎತ್ತಿ ಹಿಡಿಯುವುದಕ್ಕೆ ಚುನಾವಣೆ ಸಂದರ್ಭದಲ್ಲಿ 5 ಗ್ಯಾರಂಟಿ ಕೊಟ್ಟು, ಪ್ರಾರಂಭಿಸಲಾಗಿದೆ. ಜನರಿಗೆ ಹಸಿವು ಮುಕ್ತತೆ, ವಾಸಿಸಲು ಸೂರು, ಆರೋಗ್ಯ ಸಂರಕ್ಷಣೆ ಮತ್ತು ಎಲ್ಲರಿಗೂ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಬುಧವಾರ ದಾವಣಗೆರೆ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಮುಖವಾಗಿ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಅವುಗಳಲ್ಲಿ ಗೃಹಲಕ್ಷ್ಮಿ ಸೇರಿದಂತೆ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ, ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್‍ಗಳವರೆಗೆ ಉಚಿತ ವಿದ್ಯುತ್ ಬಳಕೆಯ ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಬಿ.ಪಿ.ಎಲ್.ಕುಟುಂಬದವರಿಗೆ ತಿಂಗಳಿಗೆ 10 ಕೆ.ಜಿ.ಧಾನ್ಯದಲ್ಲಿ ಐದು ಕೆ.ಜಿ.ಧಾನ್ಯ ನೀಡಿ ಉಳಿದ 5 ಕೆಜಿಗೆ ನಗದು ಜಮಾ ಮಾಡಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ಆಗಸ್ಟ್ 30 ರಿಂದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡಲು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪದವೀಧರರಿಗೆ ಮತ್ತು ಡಿಪ್ಲೊಮಾ ಪಾಸಾದವರಿಗೆ ಪ್ರತಿ ತಿಂಗಳು ಎರಡು ವರ್ಷದವರೆಗೆ ರೂ.3000 ಮತ್ತು ರೂ.1500 ಗಳ ಶಿಷ್ಯವೇತನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3,27,472 ಮಹಿಳೆಯವರು ನೊಂದಣಿ ಮಾಡಿಸಿದ್ದಾರೆ. ಇವರಿಗೆ ಇನ್ನು ಮುಂದೆ ಪ್ರತಿ ತಿಂಗಳು ಎರಡು ಸಾವಿರ ಅವರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಇದಕ್ಕಾಗಿ ಜಿಲ್ಲೆಗೆ 64,80,92,000 ರೂ.ಗಳ ಅನುದಾನವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಶೇ 15 ರಷ್ಟು ಮಹಿಳೆಯರು ಯೋಜನೆಯಿಂದ ಹೊರಗಿದ್ದು ಮುಂದಿನ ದಿನಗಳಲ್ಲಿ ಇವರಿಗೂ ಯೋಜನೆಯ ಲಾಭ ಸಿಗಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಮಾತನಾಡಿ ರಾಜ್ಯದಲ್ಲಿ ಇಂದು ಸುರ್ವರ್ಣಾಕ್ಷರದಲ್ಲಿ ಬರೆದಿಡುವ ದಿನ ಇದಾಗಿದ್ದು, ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯೋದ್ದೇಶದಿಂದ ಮಹಿಳೆಯರ ಸಬಲೀಕರಣ ಹಾಗೂ ಅವರಿಗೆ ಶಕ್ತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೃಹಲಕ್ಷ್ಮಿ ನೊಂದಣಿಗೆ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ 194 ಕೇಂದ್ರ ತೆರೆದಿದ್ದು ಯಾವುದೇ ವೆಚ್ಚವಿಲ್ಲದಂತೆ 3,27,462 ಫಲಾನುಭವಿಗಳನ್ನು ನೊಂದಾಯಿಸಲಾಗಿದೆ. ಈ ಯೋಜನೆ ಅನುಷ್ಟಾನಕ್ಕಾಗಿ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆಮಾಡಿದ್ದು, ಮನೆಮನೆಗೆ ತೆರಳಿ ಗೃಹಲಕ್ಷ್ಮೀ ಯೋಜನೆ ನೊಂದಣಿಯನ್ನು ಯಶಸ್ವಿಗೊಳಿಸಲಾಯಿತು. ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಕೆ ಕಡಿಮೆಯಾಗಿದ್ದು, ಆ ಭಾಗದಲ್ಲಿ ನೊಂದಣಿಗೆ ಹೆಚ್ವಿನ ಆದ್ಯತೆ ನೀಡಿ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಹೆಚ್ಚಿನ ಜನರನ್ನು ನೊಂದಾಯಿಸಿದ್ದು ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರಲು ಸಹಕಾರಿಯಾಯಿತು ಎಂದರು.

ಮಹಾನಗರಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯರಾದ ಜಯಮ್ಮ ಗೋಪಿನಾಥ್, ಎ.ನಾಗರಾಜ್, ಉಪವಿಭಾಗಾಧಿಕಾರಿ ದುರ್ಗಾಶ್ರೀ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಆಯುಕ್ತರಾದ ರೇಣುಕಾ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular