ಬೆಂಗಳೂರು: 2025–26ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಶಿಕ್ಷಣ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಸಹಶಿಕ್ಷಣ ಹೊಂದಿರುವ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಸೂಚಿಸಲಾಗಿದೆ.
ಆಯುಕ್ತ ತ್ರಿಲೋಕ್ ಚಂದ್ರ ಅವರ ಪ್ರಕಾರ, ಈ ಪ್ರಮಾಣದ ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಮೀಸಲಿಟ್ಟ ಬಳಿಕ ಬಾಕಿ ಉಳಿದಿದ್ದರೆ ಮಾತ್ರ ಗಂಡು ಮಕ್ಕಳಿಗೆ ಆ ಸ್ಥಾನಗಳು ನೀಡಬಹುದು. ಇದು ವಿದ್ಯಾರ್ಥಿಗಳಲ್ಲಿ ಲಿಂಗ ಸಮತೋಲನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎನಿಸಿದೆ.
ಶಾಲಾ ಪ್ರವೇಶದ ಸಂದರ್ಭದಲ್ಲಿ ಪರೀಕ್ಷೆ ಅಥವಾ ಸಂದರ್ಶನ ನಡೆಸುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಲಾಗಿದೆ. ಜೊತೆಗೆ, ನಿಗದಿತ ಶುಲ್ಕವನ್ನು ಶಾಲೆಯ ನೋಟಿಸ್ ಬೋರ್ಡ್, ವೆಬ್‌ಸೈಟ್ ಹಾಗೂ ಎಸ್‌ಎಟಿಎಸ್ ತಂತ್ರಾಂಶದಲ್ಲಿ ಪ್ರಕಟಿಸಬೇಕು. ಕ್ಯಾಪಿಟೇಷನ್ ಶುಲ್ಕವಸೂಲಿ ಮಾಡುವಂತಿಲ್ಲ ಮತ್ತು ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿ ಸೇರಿದಂತೆ ವಿಶೇಷ ಚೇತನ ಮಕ್ಕಳಿಗೂ ದಾಖಲೆಗಾಗಿ ಅವಕಾಶ ಕಲ್ಪಿಸಬೇಕು. ಎಸ್ಸಿ/ಎಸ್ಟಿ ಅನುದಾನಿತ ಶಾಲೆಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಆ ಸಮುದಾಯದ ಮಕ್ಕಳಿಗೆ ನೀಡಬೇಕು. ನಿಯಮ ಪಾಲನೆ ಕಡ್ಡಾಯವಾಗಿದ್ದು, ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.