ಚಾಮರಾಜನಗರ: ಜಿಲ್ಲಾಧ್ಯಂತ ನಾಡಪ್ರಭು ಕೆಂಪೇಗೌಡ ಅವರ ೫೧೪ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ,ಕೊಳ್ಳೇಗಾಲ ಗುಂಡ್ಲುಪೇಟೆ,ಯಳಂದೂರು ಹಾಗೂ ಹನೂರು ತಾಲೂಕುಗಳ ಗ್ರಾಮಗಳಲ್ಲಿ ಬಹಳ ಸಡಗರ, ಸಂಭ್ರಮದಿಂದ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಣೆ ಮಾಡಲಾಯಿತು. ಅಲ್ಲದೆ ಜಿಲ್ಲೆಯ ೫ ತಾಲೂಕುಗಳ ಸಮುದಾಯದ ಮುಖಂಡರುಗಳೆಲ್ಲ ಸೇರಿ ಕೆಂಪೇಗೌಡರ ಜಯಂತಿಯನ್ನು ಒಕ್ಕೋರಲಾಗಿ ಆಚರಿಸಿದರು.
ನಗರದ ವರನಟ ಡಾ.ರಾಜಕುಮಾರ್ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲೆಯ ಅಪಾರ ಜಿಲ್ಲಾಧಿಕಾರಿ ಖಾತ್ಯಾಯಿಣಿ ದೇವಿ ಉದ್ಘಾಟಿಸಿದರು.ಡಿವೈಎಸ್ಪಿ ಪ್ರಿಯಾದರ್ಶಿನಿ ಸಾಣಿಕೊಪ್ಪ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರಿನ ನಿರ್ಮಾತೃ ಆಗಿದ್ದಾರೆ.ಅವರ ಜಯಂತಿಯನ್ನು ನಾವು ಬಹಳ ವಿಜೃಂಭಣೆಯಿಂದ ಆಚರಿಸುತಿರುವುದು ತುಂಬಾ ಸಂತೋಷಕರವಾಗಿದೆ.ಅವರ ಸಾಧನೆ ಪ್ರತಿಯೊಬ್ಬ ವ್ಯಕ್ತಿಗೂ ವಿವರವಾಗಿ ತಿಳಿಯಬೇಕು. ಅವರು ಮಾನವ ಕುಲದ ಉದ್ಧಾರದ ಕನಸನ್ನು ನನಸಾಗಿಸುವುದನ್ನು ಕಂಡಿದ್ದರು.ಈಗಿನ ಬೆಂಗಳೂರು ಪ್ರಪಂಚದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.ಕೆಂಪೇಗೌಡರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿಯಬೇಕು.ಛಲದಿಂದ ಯಾವುದೇ ಕೆಲಸವನ್ನು ಮಾಡಿದರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಉದಾಹರಣೆ ಕೆಂಪೇಗೌಡರ ಸಾಧನೆಯಾಗಿದೆ.
ಮೈಸೂರು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕಿ ಡಾ.ಟಿ.ಜಯಲಕ್ಷ್ಮಿ ಸೀತಾಪುರ ಅವರು ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವುದರ ಜೊತೆಗೆ ೫೦೦ಕ್ಕೂ ಹೆಚ್ಚು ಅಲ್ಲಿ ಕೆರೆಗಳನ್ನು ನಿರ್ಮಿಸಿದ್ದಾರೆ.೫೦೦ ವರ್ಷಗಳ ಹಿಂದೆಯೇ ಆಳ್ವಿಕೆ ಮಾಡಿದ ಇವರು ರಾಜ್ಯದಲ್ಲಿದ್ದ ಮೌಢ್ಯತೆಯನ್ನು ನಿವಾರಣೆ ಮಾಡಲು ಪ್ರಯತ್ನಿಸಿದರು. ಕೆಂಪೇಗೌಡರು ಜನರಿಗೆ ವೈಚಾರಿಕ ನೆಲೆ ಕಟ್ಟಿಸಿದರು. ಅಲ್ಲದೆ ಇವರಿಗೆ ವಿಜಯನಗರ ಅರಸರ ಸಹಾಯವು ಇತ್ತು ಎಂದು ಹೇಳಿದರು.
ವೇದಿಕೆ ಕಾರ್ಯ ಕ್ರಮದ ಮುಂಚೆ ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಕೆಂಪೇಗೌಡರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅಲ್ಲಿಂದ ಶ್ರೀ ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ತೆರಳಿ ವರನಟ ಡಾ.ರಾಜಕುಮಾರ್ ಕಲಾ ಮಂದಿರದಲ್ಲಿ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಗೌಡ ಹಾಗೂ ಸಮುದಾಯದ ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ,ರಾಜು, ನಾಗೇಂದ್ರ,ಚಿನ್ನ,ಮಹೇಶ್ ಇದ್ದರು.