ವರದಿ: ಸ್ಟೀಫನ್ ಜೇಮ್ಸ್..
ಚಿಕ್ಕೋಡಿ: ಕಬ್ಬು ಬೆಳೆಗಾರರು, ಕಾರ್ಖಾನೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಅರಿಹಂತ ಶುಗರ್ಸ್ ಪ್ರಸಕ್ತ ಹಂಗಾಮಿನಲ್ಲಿ 6ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಯುವ ಗುರಿ ಹೊಂದಿದೆ ಎಂದು ಅರಿಹಂತ ಶುಗರ್ಸ್ ಇಂಡಸ್ಟ್ರೀಸ್ ಎಂ.ಡಿ. ಅಭಿನಂದನ ಪಾಟೀಲ ಹೇಳಿದರು.
ಸಮೀಪದ ಜೈನಾಪುರ ಶ್ರೀ ಅರಿಹಂತ ಶುಗರ್ ಇಂಡಸ್ಟ್ರೀಸ್ ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 8ನೇ ಬಾಯರ್ ಅಗ್ನಿ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಬ್ಬಿಗೆ ನ್ಯಾಯಯುತ ಬೆಲೆ ನೀಡಲು ಏಳು ವರ್ಷದಿಂದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ದಿ.ರಾವಸಾಹೇಬ ಪಾಟೀಲ ಅವರು ರೈತರ ಆರ್ಥಿಕ ಶೋಷಣೆ ನಿಲ್ಲಿಸಲು ಮತ್ತು ನ್ಯಾಯಯುತ ಬೆಲೆ ನೀಡಲು ಈ ಕಾರ್ಖಾನೆ ಮೂಲಕ ವಿಶೇಷ ಪ್ರಯತ್ನ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ 7 ವರ್ಷಗಳಲ್ಲಿ ರೈತರು ಮತ್ತು ಕಬ್ಬು ಬೆಳೆಗಾರರಿಗಾಗಿ ವಿವಿಧ ಯೋಜನೆ ಕೈಗೊಂಡಿದ್ದೇವೆ. ಈ ವರ್ಷ ಕಾರ್ಖಾನೆ ಕ್ರಷಿಂಗ್ ಸಾಮರ್ಥ್ಯ ಹೆಚ್ಚಿಸಲಾಗಿದೆ. ರೈತರು ಮತ್ತು ಸಿಬ್ಬಂದಿಗೆ ಸರಿಯಾದ ಸಮಯದಲ್ಲಿ ಸಂಬಳ ಮತ್ತು ಬೋನಸ್ ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.
ಯುವರಾಜ ಪಾಟೀಲ ದಂಪತಿ ಧಾರ್ಮಿಕ ಪೂಜೆ ಸಲ್ಲಿಸಿದರು. ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಪೃಥ್ವಿರಾಜ ಪಾಟೀಲ, ವೈಷ್ಣವಿ ಪಾಟೀಲ, ಕಾರ್ಖಾನೆ ಸಿಇಒ ಮಹಾವೀರ ಪಾಟೀಲ, ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಬಿರನಾಳೆ, ಕೃಷಿ ಅಧಿಕಾರಿ ವಿಜಯ ಬಾಮನಗಿ, ಚೀಪ್ ಇಂಜಿನಿಯರ್ ಸುಧೀರ ಪಾಟೀಲ, ರೋಹಿತ ಕಟಿಗೇರಿ, ಎಚ್.ಆರ್.ಸನತ, ರಿಷಬ್ ಬಳ್ಳೋಳ ಇತರರಿದ್ದರು.