ಬೆಂಗಳೂರು : ಶಸ್ತ್ರಾಸ್ತ್ರ ಕೈಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಹೆಜ್ಜೆ ಹಾಕಿದ್ದ ಆರು ಮಂದಿ ನಕ್ಸಲೀಯರನ್ನು ಎನ್‍ಐಎ ನ್ಯಾಯಾಲಯ ಜ.30ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಿನ್ನೆಯಷ್ಟೇ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಶರಣಾಗತರಾಗಿದ್ದ ಆರು ಮಂದಿ ನಕ್ಸಲೀಯರನ್ನು ಕಾನೂನು ಪ್ರಕ್ರಿಯೆ ಅನ್ವಯ ಗುರುವಾರ ಇಲ್ಲಿನ ಮಡಿವಾಳದ ತಾಂತ್ರಿಕ ಕೇಂದ್ರದಲ್ಲಿರಿಸಿ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದ ತಂಡ ವಿಚಾರಣೆ ನಡೆಸಿತು. ಈ ವೇಳೆ ಚಿಕ್ಕಮಗಳೂರು ಪೊಲೀಸರ ಜೊತೆಗೆ ನಕ್ಸಲ್ ನಿಗ್ರಹ ಪಡೆ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳು ನಕ್ಸಲೀಯರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.
ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನಗರದ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಜ.30ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಭೂಗತವಾಗಿರುವ ಎಲ್ಲ ಸದಸ್ಯರ ಹೆಸರುಗಳನ್ನ ಬಹಿರಂಗಪಡಿಸಬೇಕಿದೆ. ಶರಣಾದವರ ಸ್ವ ಇಚ್ಛಾ ಹೇಳಿಕೆಯನ್ನು ಇನ್ ಕ್ಯಾಮರಾ ವಿಧಾನದಲ್ಲಿ ದಾಖಲಿಸಬೇಕು. ಬಳಿಕ ಶರಣಾಗತಿ ವರದಿ ತಯಾರಿಸಿ, ಜಿಲ್ಲಾ ಶರಣಾಗತಿ ಸಮಿತಿಯ ಮುಂದಿಡಬೇಕು. ರಾಜ್ಯ ಶರಣಾಗತಿ ಸಮಿತಿಗೆ ಅನುಮೋದನೆಗಾಗಿ ಕಳುಹಿಸಿಕೊಡಬೇಕು. ಅನುಮತಿ ದೊರೆತ ಬಳಿಕ ಸರಕಾರ ಘೋಷಿಸಿರುವ ವಿಶೇಷ ಸೌಲಭ್ಯವನ್ನ ಜಿಲ್ಲಾ ಸಮಿತಿ ನೀಡಬೇಕೆಂದು ನ್ಯಾಯಾಲಯ ಉಲ್ಲೇಖಿಸಿದೆ ಎಂದು ವರದಿಯಾಗಿದೆ.
ಶರಣಾದವರಲ್ಲಿ ಚಿಕ್ಕಮಗಳೂರಿನ ಮುಂಡಗಾರು ಲತಾ ಮತ್ತು ವನಜಾಕ್ಷಿ, ದಕ್ಷಿಣ ಕನ್ನಡದ ಕೋಟ್ಲೂರಿನ ಸುಂದರಿ, ಕೇರಳದ ಜಿಶಾ, ತಮಿಳುನಾಡಿನ ವಸಂತ.ಕೆ, ರಾಯಚೂರಿನ ಮಾರಪ್ಪ ಅರೋಲಿ ಸೇರಿದ್ದಾರೆ.
ನಕ್ಸಲರು ಶರಣಾಗುವ ವೇಳೆ ಸಮವಸ್ತ್ರಗಳನ್ನು ಮತ್ತು ಔಪಚಾರಿಕ ಶರಣಾಗತಿ ಪತ್ರವನ್ನು ಸಿಎಂಗೆ ಹಸ್ತಾಂತರಿಸಿದರು, ಇದು ಮುಖ್ಯವಾಹಿನಿಯ ಸಮಾಜದಲ್ಲಿ ಏಕೀಕರಣದ ಕಡೆಗೆ ಬಂಡಾಯದಿಂದ ದೂರ ಸರಿಯುವುದನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಸರಕಾರದ ಪುನರ್ವಸತಿ ಪ್ರಯತ್ನಗಳ ಭಾಗವಾಗಿ, ಆರು ಮಂದಿಗೂ ತಲಾ 3 ಲಕ್ಷ ರೂ. ಮತ್ತು ಇತರ ಬೆಂಬಲಗಳನ್ನೂ ನೀಡಲಾಗುತ್ತದೆ.