ಬೆಂಗಳೂರು : ರಾಜ್ಯದಲ್ಲಿ 1ನೇ ತರಗತಿ ಪ್ರವೇಶಕ್ಕೆ ಜೂನ್ 1 ಕ್ಕೆ 6 ವರ್ಷ ತುಂಬಿರಬೇಕು ಎಂಬ ವಯೋಮಿತಿ ನಿಗಿದಿ ಮಾಡಿರುವುದನ್ನು ಸಡಿಲಿಕೆ ಮಾಡುವ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿ ಪ್ರವೇಶಕ್ಕೆ ಜೂ.1ಕ್ಕೆ ಆರು ವರ್ಷ ತುಂಬಿರ ಬೇಕು ಎಂಬ ವಯೋಮಿತಿ ನಿಗದಿ ಮಾಡಿರುವುದನ್ನು ಸಡಿಲಿಕೆ ಮಾಡುವಂತೆ ಪಾಲಕರು ಒತ್ತಾಯಿಸಿದ್ದಾರೆ. ಈ ವಿಚಾರವನ್ನು ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ರವಾನೆ ಮಾಡಿದ್ದೇವೆ. ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯದಲ್ಲಿ ಕೊರತೆ ಇರುವ ಶಿಕ್ಷಕರ ಪ್ರಮಾಣವನ್ನು ಕಡಿಮೆ ಮಾಡಲು ಶೀಘ್ರದಲ್ಲೇ ನೇಮಕಾತಿ ನಡೆಸುತ್ತೇವೆ. ಅತಿಥಿ ಉಪನ್ಯಾಸಕರಿಂದ ಹೆಚ್ಚಿನ ಗುಣಮಟ್ಟ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ. ಫಲಿತಾಂಶ ಕುಸಿತಕ್ಕಾಗಿ ಹಿಂದಿನವರನ್ನು ನಾವು ದೂಷಿಸುವುದಿಲ್ಲ. ಬದಲಾಗಿ ನಾವು ಮುಂದಿನ ಪರೀಕ್ಷೆಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷ ಣದ ಸುಧಾರಣೆಗೆ ಕ್ರಮ ತೆಗೆದು ಕೊಳ್ಳುತ್ತಿದ್ದೇವೆ ಎಂದು ಹೇಳಿದರು.