ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಮತ ಅಧಿಕಾರ ಯಾತ್ರೆ ಆರಂಭಿಸಿದರೆ, ಇತ್ತ ಪಟ್ಟಿಯಿಂದ ಅಳಿಸಲಾದ 65 ಲಕ್ಷ ಮತದಾರರ ಹೆಸರನ್ನು ಸಾರ್ವಜನಿಕಗೊಳಿಸಲಾಗಿದೆ.
ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಮೇರೆಗೆ ಚುನಾವಣಾ ಆಯೋಗವು ಈ ಪಟ್ಟಿಯನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಂತರ ಚುನಾವಣಾ ಸಂಸ್ಥೆ ಪ್ರಕಟಿಸಿದ ಕರಡು ಪಟ್ಟಿಯಿಂದ ಹೆಸರುಗಳನ್ನು ಅಳಿಸಿದ ಮತದಾರರ ಹೆಸರುಗಳು ಬಿಡುಗಡೆಗೊಳಿಸಲಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಆಗಸ್ಟ್ 19 ರೊಳಗೆ ಪಟ್ಟಿಗಳನ್ನು ಅಪ್‌ಲೋಡ್ ಮಾಡಲು ಗಡುವು ವಿಧಿಸಿತ್ತು ಮತ್ತು ಆಗಸ್ಟ್ 22 ರಂದು ನಡೆಯುವ ಮುಂದಿನ ವಿಚಾರಣೆಯ ಮೊದಲು ಅನುಸರಣಾ ವರದಿಯನ್ನು ಸಲ್ಲಿಸುವಂತೆ ಚುನಾವಣಾ ಸಂಸ್ಥೆಗೆ ಸೂಚಿಸಿತ್ತು.
ಜೊತೆಗೆ ಮತದಾರರ ಪಟ್ಟಿಯಿಂದ ಹೊರಗುಳಿದ ಎಲ್ಲಾ ಮತದಾರರ ಜಿಲ್ಲಾವಾರು ಪಟ್ಟಿಯನ್ನು ಪ್ರಕಟಿಸುವಂತೆ ಮತ್ತು ಸಾವು, ವಲಸೆ ಅಥವಾ ಡಬಲ್ ನೋಂದಣಿಯಿಂದಾಗಿ ಅವರ ಹೆಸರನ್ನು ಅಳಿಸುವಿಕೆಗೆ ಸೂಕ್ತ ಕಾರಣಗಳನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಸಂಸ್ಥೆಗೆ ನಿರ್ದೇಶನ ನೀಡಿದೆ.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತಗಟ್ಟೆವಾರು ಮತದಾರರ ಪಟ್ಟಿಯನ್ನು ಪ್ರದರ್ಶಿಸುವಂತೆ ಹಾಗೂ ಪ್ರತಿಯೊಂದು ಪತ್ರಿಕೆ, ರೇಡಿಯೋ, ಟಿವಿ ಇತ್ಯಾದಿಗಳಲ್ಲಿ ಜಾಹೀರಾತುಗಳ ಮೂಲಕ ಮಾಹಿತಿಯನ್ನು ಪ್ರಚಾರ ಮಾಡುವಂತೆ ಸುಪ್ರೀಂ ಆದೇಶಿಸಿತ್ತು.
ಅದರಂತೆ ಇದೀಗ ಚುನಾವಣಾ ಆಯೋಗವು 65 ಲಕ್ಷ ಮತದಾರರ ಹೆಸರನ್ನು ಸಾರ್ವಜನಿಕಗೊಳಿಸಲಾಗಿದ್ದು, ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾದ ಹೆಸರುಗಳು, ಸೇರಿಸದಿರಲು ಕಾರಣಗಳು ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.
ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಬಹು ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ಪಟ್ಟಿಯನ್ನು ಪ್ರಕಟಿಸುವಂತೆ ಆದೇಶಿಸಿತ್ತು. ಇದಕ್ಕೆ ಕಾನೂನು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಕಟ್ಟುನಿಟ್ಟಾಗಿ ಪರಿಷ್ಕರಣಾ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಚುನಾವಣಾ ಆಯೋಗವು ಪ್ರತಿಪಾದಿಸಿದೆ.
ಇನ್ನು ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮತ ಕಳ್ಳತನ ಆರೋಪದ ಬಗ್ಗೆ ಕಟುವಾಗಿ ಟೀಕಿಸಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಗುರಿಯಾಗಿಸಿಕೊಂಡು ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುತ್ತಿವೆ ಎಂದು ಆಯೋಗವು ಕಿಡಿಕಾರಿದೆ.
ಇನ್ನೊಂದೆಡೆ, ಚುನಾವಣಾ ಆಯೋಗದ ವಿರುದ್ಧದ ಆರೋಪಗಳಿಗೆ ಏಳು ದಿನಗಳಲ್ಲಿ ಪುರಾವೆಗಳೊಂದಿಗೆ ಅಫಿಡವಿಟ್ ಸಲ್ಲಿಸಬೇಕು ಅಥವಾ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಹುಲ್ ಗಾಂಧಿಗೆ ಸೂಚಿಸಿದ್ದಾರೆ.