ಚನ್ನಪಟ್ಟಣ: ಒಂದು ಕಾಲದಲ್ಲಿ ತಮಿಳು, ತೆಲುಗು, ಮಲೆಯಾಳಿ, ಮರಾಠಿ ಭಾಷಿಕರ ವಿರುದ್ಧ ಹೋರಾಟ ನಡೆಸಿದ್ದ ಕನ್ನಡ ಮಾತನಾಡುವಂತೆ ಚಳವಳಿ ಹಮ್ಮಿಕೊಂಡಿದ್ದ ಕನ್ನಡಿಗರು ಇದೀಗ ಕನ್ನಡಿಗರನ್ನೇ ತಮ್ಮ ಭಾಷೆ ಉಳಿಸುವಂತೆ ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ ವಿಷಾಧ ವ್ಯಕ್ತಪಡಿಸಿದರು.
ನಗರದ ಕರಬಲ ಮೈದಾನದಲಿ ೬೮ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಇಂದು ಕನ್ನಡ ಮಾತನಾಡುವಂತೆ, ಕನ್ನಡ ಭಾಷೆ ಬಳಕೆ ಮಾಡುವಂತೆ ಕನ್ನಡಿಗರೇ ಕನ್ನಡಿಗರನ್ನು ಒತ್ತಾಯಿಸುವ ಪರಿಸ್ಥಿತಿ ಇದೆ. ಒಂದು ಕಾಲದಲ್ಲಿ ತಮಿಳು, ತೆಲುಗು, ಮಲೆಯಾಳಿ, ಮರಾಠಿ ಭಾಷಿಕರ ವಿರುದ್ಧ ಹೋರಾಟ ನಡೆಸಿದ್ದ ಖ್ಯಾತಿ ನಮಗಿತ್ತು. ಕನ್ನಡ ಮಾತನಾಡುವಂತೆ ಚಳವಳಿ ಹಮ್ಮಿಕೊಂಡಿದ್ದ ಕನ್ನಡಿಗರು ಇದೀಗ ಕನ್ನಡಿಗರನ್ನೇ ತಮ್ಮ ಭಾಷೆ ಉಳಿಸಿ ಬೆಳೆಸುವಂತೆ ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.

ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರ ಹಲವು ಭಾಷೆ, ಸಂಸ್ಕೃತಿ, ಜೀವನ ಪದ್ಧತಿಗೆ ಹೆಸರಾಗಿದೆ. ಒಂದು ಕಾಲದಲ್ಲಿ ಕನ್ನಡ ಭಾಷೆಗೆ ಖ್ಯಾತವಾಗಿತ್ತು ಕನ್ನಡ ಚಿತ್ರಗಳು ಬಿಡುಗಡೆಯಾದರೆ ಇಲ್ಲಿನ ಕನ್ನಡಿಗರು ಸಂಭ್ರಮಿಸುತ್ತಿದ್ದರು. ಈಗ ಏಳೆಂಟು ಭಾಷೆಯ ಚಿತ್ರಗಳು ಏಕಕಾಲಕ್ಕೆ ತೆರೆ ಕಾಣುತ್ತಿವೆ. ಭಾಷೆ ಉಳಿಸುವಲ್ಲಿ ಚಿತ್ರೋದ್ಯಮ ಬಹುದೊಡ್ಡ ಕೊಡುಗೆ ನೀಡಿತ್ತು. ಇದೀಗ ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗಿ ಹಾಗೆಯೇ ಮರೆಯಾಗುವ ಪರಿಸ್ಥಿತಿ ಇದೆ. ಆಧುನಿಕ ಭರಾಟೆಯಲ್ಲಿ ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕುವ ದಯನೀಯ ಸ್ಥಿತಿ ಇದೆ. ಯಾವುದೇ ರಾಜಕೀಯ ಪಕ್ಷ ಕನ್ನಡಕ್ಕೆ ಪ್ರಧಾನ ಆದ್ಯತೆ ನೀಡುತ್ತಿಲ್ಲ. ತನ್ನ ಪ್ರಣಾಳಿಕೆಗಳಲ್ಲಿ ಕನ್ನಡಪರ ಸಮಸ್ಯೆಗಳಿಗೆ ಪರಿಹಾರ ನೀಡುವ ವಾಗ್ದಾನ ಕೊಡುತ್ತಿಲ್ಲ. ಆಡಳಿತ ಭಾಷೆ ಕನ್ನಡವಾದರೂ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವ ರಾಜಕೀಯ ನಾಯಕರು ಕನ್ನಡ, ಕನ್ನಡಿಗರು ಎಂದರೆ ಅಸಡ್ಡೆಯಿಂದ ವರ್ತಿಸುವುದನ್ನು ಕಾಣುತ್ತಿದ್ದೇವೆ. ದುರ್ದೈವವೆಂದರೆ ಕನ್ನಡ ಇದೀಗ ಮತಗಳನ್ನು ತಂದುಕೊಡುವ ಭಾಷೆಯಾಗಿಯೂ ಉಳಿದಿಲ್ಲ ಎಂದು ರಾಜಕಾರಣಿಗಳೇ ಸಂಕೋಚವಿಲ್ಲದೇ ಹೇಳಿಕೊಳ್ಳುತ್ತಿದ್ದಾರೆ ಎಂದರು.
ನವೆಂಬರ್ ತಿಂಗಳಿಗೆ ಕನ್ನಡಿಗರ ಭಾವಕೋಶದಲ್ಲಿ ವಿಶಿಷ್ಠ ಸ್ಥಾನವಿದೆ. ನಾಡಾಭಿಮಾನಿಗಳಿಗೆ ನವೆಂಬರ್ ಎಂದರೆ ಕನ್ನಡ ಮಾಸ. ಕನ್ನಡಾಭಿಮಾನ ಬಹಿರಂಗವಾಗಿ ಪ್ರಕಟವಾಗುವ ತಿಂಗಳಿದು. ಎಲ್ಲೆಲ್ಲೂ ಕನ್ನಡ ಬಾವುಟಗಳು ಹಾರಾಡುತ್ತವೆ. ಇತ್ತೀಚೆಗೆ ಈ ವಾತಾವರಣ ಕಡಿಮೆಯಾಗುತ್ತಿದೆ. ರಾಜ್ಯೋತ್ಸವ ಘೋಷಣೆ-ಭಾಷಣಗಳಿಗೇ ಸೀಮಿತವಾಗದೇ ಕನ್ನಡ ಜಾಗೃತಿಗೆ ವೇದಿಕೆ ಆಗಬೇಕಾಗಿದೆ ಎಂದರು ಈ ಸಂದರ್ಭದಲ್ಲಿ ಜಗನಂದನ್, ಹರೀಶ್ ,ನವೀನ್, ನಾಗೇಂದ್ರ ,ವೆಂಕಟೇಶ್, ಮನು ,ನಾರಾಯಣ್ ,ಕುಮಾರ್ ,ಚಂದ್ರು ,ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.