ನಂಜನಗೂಡು: ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಬರಗಾಲವಿದ್ದು ಮಳೆಯ ಅಭಾವದಿಂದ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು ಬೇಡಿಕೆ ಹೆಚ್ಚಾಗಿದ್ದರೂ ಸಹ ಸರ್ಕಾರ ರೈತರಿಗೆ ದಿನಕ್ಕೆ ೭ ಗಂಟೆ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಿರುವುದು ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ದಾಸನೂರು ಪಂಚಾಯ್ತಿ ವ್ಯಾಪ್ತಿಯ ದಾಸನೂರು, ಅವತಾಳಪುರ, ಕಾರೆಮೋಳೆ, ಚಿಕ್ಕಹೊಮ್ಮ, ದೊಡ್ಡಹೊಮ್ಮ, ತೊರಳ್ಳಿ ಮೋಳೆ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪಿಂಚಣಿ ಅದಾಲತ್, ಕಂದಾಯ ಅದಾಲತ್, ಪಿಂಚಣಿ ನೇಮಕಾತಿ ಪತ್ರ ವಿತರಣೆಗೆ ಚಾಲನೆ ನೀಡಿದ ಅವರು ಬಸ್ ವ್ಯವಸ್ಥೆ ಸರಿಪಡಿಸಲು ಸ್ಥಳದಲ್ಲೇ ಇದ್ದ ಸಾರಿಗೆ ಅಧಿಕಾರಿಗೆ ಸೂಚಿಸಿದರು. ಕೆಲವರು ಮನೆಬೇಕು ಎಂದಾಗ ಮಾಡಿಕೊಡುವುದಾಗಿ ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯ ಹಣ ಕೆಲವರಿಗೆ ಇನ್ನೂ ಬಂದಿಲ್ಲ ಎಂಬ ದೂರುಗಳಿದ್ದು ಅವೆಲ್ಲವನ್ನು ಈ ತಿಂಗಳ ೨೦ರೊಳಗೆ ಸರ್ಕಾರ ಕ್ರಮಕೈಗೊಳ್ಳುತ್ತದೆ. ಇದರ ಬಗ್ಗೆ ಅನುಮಾನವೇ ಬೇಡ, ಕಾಂಗ್ರೆಸ್ ಸರ್ಕಾರ ಎಂದೂ ಕೊಟ್ಟ ಮಾತಿಗೆ ತಪ್ಪಿಲ್ಲ. ನುಡಿದಂತೆ ನಡೆದ ಸರ್ಕಾರ ಈ ರಾಜ್ಯದಲ್ಲಿ ಇದ್ದರೆ ಅದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ. ಆದ್ದರಿಂದ ನಮ್ಮ ಸರ್ಕಾರ ಇನ್ನೂ ನಾಲ್ಕೂವರೆ ವರ್ಷವಿರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಜನರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ತಹಸೀಲ್ದಾರ್ ಶಿವಕುಮಾರ್, ಇಓ ರಾಜೇಶ್ ಜೆರಾಲ್ಡ್, ಡಿವೈಎಸ್‌ಪಿ ಗೋವಿಂದರಾಜು, ಉಪತಹಸೀಲ್ದಾರ್ ಮಹಾದೇವಮೂರ್ತಿ, ಆರ್‌ಐ ಡಿಸೋಜ಼, ಪಿಡಿಓ ನಾರಾಯಣನಾಯ್ಕ, ನಾಗೇಶ್, ಪದ್ಮನಾಭ್, ಪುಟ್ಟಸ್ವಾಮಿ, ಮಾದಪ್ಪ, ಪರಶಿವಮೂರ್ತಿ, ಮರಿಸ್ವಾಮಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಹಾಜರಿದ್ದರು.
