ಮೈಸೂರು: ದೇಶದಲ್ಲಿ ಒಂದೆಡೆ ವಿಪರೀತ ಮಳೆಯಾಗಿದ್ದರೆ, ಮತ್ತೊಂದು ಕಡೆ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಹವಾಮಾನ ವೈಪರೀತ್ಯದಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಆಷಾಢಮಾಸದ ಪ್ರಯುಕ್ತ ಚಾಮುಂಡಿಬೆಟ್ಟದ ತಪ್ಪಲಿನಿಂದ ಬೆಟ್ಟಕ್ಕೆ ೧೦೦೧ ಮೆಟ್ಟಿಲು ಹತ್ತುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.೭೦ರಷ್ಟು ಮಳೆ ಕೊರತೆಯಾಗಿದೆ. ಒಂದು ಕಡೆ ಭೀಕರ ಮಳೆಯಾಗಿ ಪ್ರವಾಹ ಉಂಟಾಗಿದೆ. ಇದನ್ನು ಯಾವ ರೀತಿ ನಿಭಾಯಿಸಬೇಕೆಂದು ಚಿಂತನೆ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಯಾವ ರೀತಿ ನಿರ್ವಹಣೆ ಮಾಡಬೇಕೆಂದು ಯೋಚಿಸಿ ಪ್ಲಾನ್ ಮಾಡುತ್ತೇವೆ ಎಂದು ಹೇಳಿದರು.
ಆರೋಪ-ಪ್ರತ್ಯಾರೋಪಗಳನ್ನು ಬಿಟ್ಟು ಜನರ ಬದುಕನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕಿದೆ. ಪಕ್ಷಾತೀತವಾಗಿ ಎಲ್ಲರೂ ಜನರ ರಕ್ಷಣೆಗೆ ಮುಂದಾಗಬೇಕಿದೆ ಎಂದು ನುಡಿದರು.ತಾಯಿ ಚಾಮುಂಡೇಶ್ವರಿ ಮಹಿಷ ಮರ್ಧಿನಿಯಾಗಿದ್ದಾಳೆ. ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿ ಕಾಪಾಡಬೇಕೆಂಬುದು ನಮ್ಮ ಕೋರಿಕೆ. ಪ್ರಧಾನಿ ನರೇಂದ್ರ ಮೋದಿ ೯ ವರ್ಷ ಅಧಿಕಾರ ಪೂರೈಸಿದ್ದಾರೆ. ಮುಂದಿನ ವರ್ಷದ ಆಷಾಢಮಾಸ ಬರುವ ವೇಳೆಗೆ ಮೂರನೇ ಬಾರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಬೇಕು ಎಂಬುದು ನನ್ನ ಕೋರಿಕೆಯಾಗಿದೆ. ಈ ದೇಶದ ರಕ್ಷಣೆಗಾಗಿ ಅಭಿವೃದ್ಧಿಗಾಗಿ, ಇಡೀ ಪ್ರಪಂಚದಲ್ಲಿ ಭಾರತದ ಧ್ವಜ ಎತ್ತಿ ಹಿಡಿಯಲು ನರೇಂದ್ರಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂಬ ಪ್ರಾರ್ಥನೆಯೊಂದಿಗೆ ಚಾಮುಂಡಿ ಬೆಟ್ಟ ಹತ್ತುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಇತ್ತೀಚೆಗೆ ಹಲವಾರು ದುರ್ಘಟನೆಗಳು ನಡೆದಿರುವುದು ಮನಸ್ಸಿಗೆ ತುಂಬಾ ನೋವಾಗಿದ್ದು, ಇವೆಲ್ಲವೂ ನಿವಾರಣೆ ಆಗಬೇಕು. ಚಾಮುಂಡೇಶ್ವರಿ ತಾಯಿ ಭಕ್ತರಿಗೆ ರಕ್ಷಣೆ ಕೊಡಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ. ಜೈನಮುನಿಗಳ ಹತ್ಯೆ, ತಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ಯುವಕನ ಹತ್ಯೆ ಜತೆಗೆ ಬೆಂಗಳೂರಲ್ಲೂ ಹತ್ಯೆಗಳಾಗಿದ್ದು ಮನಸ್ಸಿಗೆ ತುಂಬಾ ದುಖಃವಾಗಿದೆ. ಮನುಷ್ಯರ ಜೀವಗಳನ್ನು ಬಲಿ ತೆಗೆದುಕೊಳ್ಳುವ ದುಷ್ಟ ಶಕ್ತಿಗಳು ತಲೆ ಎತ್ತುತ್ತಿವೆ. ತಾಯಿ ಚಾಮುಂಡೇಶ್ವರಿ ಇಂತಹ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಬೇಕು ಎಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಿದ್ದೇನೆ ಎಂದರು.
ಹಿಂದುತ್ವದ ಕೆಲಸ ಮಾಡಿದಕ್ಕೆ ಹತ್ಯೆ: ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಹತ್ಯೆಯಾದ ನಮ್ಮ ಹುಡುಗ ಹನುಮ ಜಯಂತಿ ಆಚರಣೆಯ ನೇತೃತ್ವ ವಹಿಸಿಕೊಂಡಿದ್ದ. ಕೇಸರಿ ಧ್ವಜ ಹಾರಿಸಿ ಹಿಂದುತ್ವದ ಕೆಲಸ ಮಾಡಿದ್ದ. ಆತನ ಹತ್ಯೆಯಾದ ಬಳಿಕ ಮೂವರು ಮಹಿಳೆಯರು ಮಾತ್ರ ಆ ಕುಟುಂಬದಲ್ಲಿ ಉಳಿದಿದ್ದಾರೆ. ಆತನ ತಾಯಿ, ಹೆಂಡತಿ, ಮಗಳು ಉಳಿದಿದ್ದಾರೆ. ಅವರಿಗೆ ರಕ್ಷಣೆ ನೀಡುವವರು ಯಾರು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರ ಜತೆಯಲ್ಲಿರುವವರು ವೇಣುಗೋಪಾಲ್ ನಾಯಕನನ್ನು ಸಂಧಾನಕ್ಕೆ ಕರೆದು ಹತ್ಯೆ ಮಾಡಿದ್ದಾರೆ. ಇದರಿಂದ ಅವರಿಗೆ ಏನು ಲಾಭ ಸಿಕ್ಕಿತು? ಅವರಿಗೆ ಏನು ಒಳ್ಳೆಯದಾಯಿತು? ಆ ಕುಟುಂಬಕ್ಕೆ ಇನ್ಯಾರು ದಿಕ್ಕು? ಶಾಸಕರು, ಮಂತ್ರಿಗಳು, ನಾಯಕರು ಬರುತ್ತಾರೆ. ಆದರೆ, ಆ ತಾಯಿಯ, ಹೆಂಡತಿಯ, ಮಗಳ ದುಖಃ ಕೇಳುವವರು ಯಾರು ಎಂದು ಬೇಸರಿಸಿದರು.
ಕೊಲೆ ಮಾಡುವುದು ಒಂದು ನಿಮಿಷದ ಕೆಲಸ. ನಾವೆಲ್ಲರೂ ಒಂದು ವಿಚಾರದ ಪರವಾಗಿ ಕೆಲಸ ಮಾಡುತ್ತೇವೆ. ಆದರೆ, ಒಂದು ವಿಚಾರವಾಗಿ ಕೆಲಸ ಮಾಡದಂತೆ ರಾಜ್ಯದಾದ್ಯಂತ ಭಯ ಹುಟ್ಟಿಸಬೇಕೆಂಬ ಒಂದು ಷಡ್ಯಂತ್ರ ನಡೆಯುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಒಂದು ಕೋಮಿನ ಜನರನ್ನು ಓಲೈಕೆ ಮಾಡುವ ಜತೆಗೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆಂದು ನಾವು ಹೇಳಿದ್ದೆವು. ಈಗ ಅದೇ ಕೆಲಸ ಆಗುತ್ತಿದೆ. ಆದರೂ ನಾವು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ. ವೇಣುಗೋಪಾಲ್ ನಾಯಕ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.
೧೦೦೧ ಮೆಟ್ಟಿಲು ಹತ್ತಿ ಪೂಜೆ: ಈ ಬಾರಿಯ ಆಷಾಢ ಮಾಸದ ಕೊನೆಯ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡಿ ಬೆಟ್ಟದ ತಪ್ಪಲಿನ ಬಳಿಯಿಂದ ಮೆಟ್ಟಿಲುಗಳ ಮಾರ್ಗದಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾಗಿದ ಶೋಭಾ ಕರಂದ್ಲಾಜೆಗೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು. ಭಾರೀ ಜನಜಂಗುಳಿ ನಡುವೆ ಮೆಟ್ಟಿಲುಗಳ ಮೂಲಕ ಹತ್ತಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು.