Saturday, September 6, 2025
Google search engine

Homeರಾಜ್ಯಸುದ್ದಿಜಾಲಮಾಹಿತಿ ಆಯೋಗದಲ್ಲಿ ಜಿಲ್ಲೆಯ 707 ಅರ್ಜಿ ವಿಲೆವಾರಿಗೆ ಬಾಕಿ: ಬದ್ರುದ್ದೀನ್

ಮಾಹಿತಿ ಆಯೋಗದಲ್ಲಿ ಜಿಲ್ಲೆಯ 707 ಅರ್ಜಿ ವಿಲೆವಾರಿಗೆ ಬಾಕಿ: ಬದ್ರುದ್ದೀನ್

ರಾಮನಗರ: ಮಾಹಿತಿ ಹಕ್ಕು ಆಯೋಗದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ 707 ಮೇಲ್ಮನವಿ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ. ಅವರು ಹೇಳಿದರು.

ಅವರು ಸೆ. 6ರ ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಗಾರ ಹಾಗೂ ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದರು.

ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಇಲಾಖೆ ಸಂಬಂಧಿಸಿದಂತೆ 274, ಕಂದಾಯ ಇಲಾಖೆಯ 194, ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 64, ಪೋಲಿಸ್ ಇಲಾಖೆಗೆ ಸಂಬಂಧಿಸಿದ 40 ಅರ್ಜಿಗಳು ಸೇರಿದಂತೆ ಒಟ್ಟಾರೆಯಾಗಿ ಜಿಲ್ಲೆಯಲ್ಲಿ 707 ಅರ್ಜಿಗಳು ದ್ವಿತೀಯ ಮೇಲ್ಮನವಿ ಪ್ರಾಧಿಕಾರವಾದ ಮಾಹಿತಿ ಆಯೋಗದಲ್ಲಿ ಬಾಕಿ ಉಳಿದಿವೆ. ಮೇಲ್ಮನವಿ ವಿಚಾರಣೆಗೆ ಸ್ವೀಕೃತವಾಗುವ ಕ್ರಮಾಂಕದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ 21ನೇ ಸ್ಥಾನದಲ್ಲಿದ್ದು ಶೇ. 1.67ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದೆ, ಅವುಗಳನ್ನು ಶೂನ್ಯ ಸ್ಥಾನಕ್ಕೆ ತರಲು ಜಿಲ್ಲೆಯ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಶ್ರಮಿಸಬೇಕು ಎಂದವರು ಕಿವಿ ಮಾತು ಹೇಳಿದರು.

ನಾವು ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ಅವಧಿಯಲ್ಲಿ ಮಾಹಿತಿ ಹಕ್ಕು ಆಯೋಗದಲ್ಲಿ 52 ಸಾವಿರ ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿದ್ದವು, ಕಳೆದ ಏಳು ತಿಂಗಳಲ್ಲಿ ವಿಚಾರಣೆ ನಡೆಸಿದ ಪರಿಣಾಮ ನಿನ್ನೆಯ ವರೆಗೆ 42,327 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಕೆಲವೊಂದು ಅರ್ಜಿಗಳು 2015ರಿಂದಲೂ ಇತ್ಯರ್ಥಕ್ಕೆ ಬಾಕಿ ಉಳಿದಿದ್ದು, ಅವುಗಳ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದರು.

ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಹುದಾದ ನಿಕೃಷ್ಟ ಕಾಯಿದೆಯಲ್ಲ ಇದು, ಅತ್ಯಂತ ಬಲಶಾಲಿಯಾದ ಕಾಯ್ದೆ, ಈ ಕಾಯ್ದೆಯ ಪರಿಣಾಮಗಳು ಹಾಗೂ ಬದಲಾವಣೆಗಳು ಸಮಾಜದಲ್ಲಿ ಕಂಡುಬಂದಿವೆ, ಜಿಲ್ಲೆಯ ನಿವೃತ್ತ ಅಧಿಕಾರಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸ್ವೀಕೃತಗೊಂಡಾಗ ಅಧಿಕಾರಿಗಳು ತಾಯಿಯ ಸ್ಥಾನದಲ್ಲಿರಬೇಕು. ಅರ್ಜಿ ಬಂದ ಕೂಡಲೇ ಸಮಸ್ಯೆ ಇದೆ ಎಂದು ಉಡಾಫೆ ಮಾಡಬಾರದು, ನಿಗದಿ ಪಡಿಸಿದ ಅವಧಿಯಲ್ಲಿ ಮಾಹಿತಿದಾರನಿಗೆ ಲಭ್ಯವಿರುವ ಮಾಹಿತಿ ನೀಡಬೇಕು, ತಪ್ಪಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ 25 ಸಾವಿರ ರೂಪಾಯಿಗಳ ವರೆಗೆ ದಂಡವಿಧಿಸುವುದರೊಂದಿಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಹಿತಿ ಆಯೋಗದ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರು ಮಾತನಾಡಿ, ಆಡಳಿತ ಶಾಹಿ ಉತ್ತರದಾಯಿ ಆಗಿರಬೇಕು ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶ. ದೇಶದ ಜನತೆಗೆ ವಾಕ್ ಸ್ವಾತಂತ್ರö್ಯ ಇರುವಂತೆ ಜನರು ಸಾರ್ವಜನಿಕ ವ್ಯವಹಾರಗಳಲ್ಲಿ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದಾದ ಬಹು ಮುಖ್ಯವಾದ ಕಾಯ್ದೆ ಇದಾಗಿದೆ. ವಿಶ್ವದಲ್ಲಿ ಸ್ಪೀಡನ್ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೊಂಡಿತು, ನಂತರ 130 ದೇಶಗಳು ಈ ಕಾನೂನನ್ನು ಅಳವಡಿಸಿಕೊಂಡವು. ಸರ್ಕಾರದಲ್ಲಿ ಯಾವುದೇ ಪಕ್ಷ ಆಡಳಿತ ಮಾಡಿದರು ಅಧಿಕಾರಿಗಳು  ಜವಾಬ್ದಾರಿಯ ಸ್ಥಾನದಲ್ಲಿರುತ್ತಾರೆ, ಸರ್ಕಾರದ ವ್ಯವಸ್ಥೆಯಲ್ಲಿ ಕೆಲಸ ಕಾರ್ಯಗಳು ನಿಗದಿತ ಅವಧಿಯಲ್ಲಿ ಆಗಬೇಕು ಎನ್ನುವ ಸದುದ್ದೇಶದಿಂದ ಸಕಾಲ ಹಾಗೂ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಂಡಿತು ಎಂದು ಹೇಳಿದರು.

ಇದೊಂದು ಸರಳವಾದ ಕಾಯ್ದೆ ಅಂತೆಯೇ ಗಂಭೀರವಾದ ಕಾಯ್ದೆಯು ಹೌದು. ಒಂದು ಸರ್ಕಾರವನ್ನು ಬುಡಮೇಲು ಮಾಡುವಂತಹ ಶಕ್ತಿ ಈ ಕಾಯ್ದೆಗೆ ಇದೆ. ಈ ಕಾಯ್ದೆಯ ಅನುಷ್ಠಾನದಲ್ಲಿ ದೇಶದಲ್ಲಿ ಕರ್ನಾಟಕ ಮಾದರಿ ವಿಭಿನ್ನವಾಗಿದೆ, ರಾಜ್ಯದಲ್ಲಿ 2000 ದಲ್ಲಿಯೇ ಮಾಹಿತಿ ಹಕ್ಕು ಜಾರಿಗೊಂಡಿತ್ತು, 2005ರಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ನಂತರ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಂಡಿತು. ಅಧಿಕಾರಿಗಳು ಈ ಕಾಯ್ದೆಯನ್ನು ವಿವರವಾಗಿ ಓದಿಕೊಂಡು ಅರ್ಥೈಸಿಕೊಳ್ಳಬೇಕು ಹಾಗೂ ಅರ್ಜಿದಾರರಿಗೆ ಲಭ್ಯವಿರುವ ಮಾಹಿತಿಯನ್ನು ನೀಡಬೇಕು ಎಂದರು.

ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4 (1)ಎ ಮತ್ತು 4(1)ಬಿ ಯಲ್ಲಿ ಲಭ್ಯವಿರುವ ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು ಇದು ಕಡ್ಡಾಯ. ಸಾರ್ವಜನಿಕ ಮಾಹಿತಿ ಎಂದರೆ ಅದಕ್ಕೂ ಮಿತಿ ಇದೆ ನಿರಾಕರಿಸುವ ಅವಕಾಶವೂ ಇದೆ, ಯಾವ ಯಾವ ಹಂತದಲ್ಲಿ ಯಾವ ಮಾಹಿತಿಯನ್ನು ಒದಗಿಸಬೇಕು ಎನ್ನುವುದರ ಬಗ್ಗೆ ಕಾಯ್ದೆಯಲ್ಲಿ ತಿಳಿಸಲಾಗಿದೆ. ಕಾಯ್ದೆಯೊಂದಿಗೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ ನೀತಿ ನಿಯಮಗಳನ್ನು ಓದಿಕೊಳ್ಳಬೇಕು. ಅವುಗಳ ಕಾಲ ಕಾಲಕ್ಕೆ ಹೊರಡಿಸುವ ತೀರ್ಪುಗಳನ್ನು ತಿಳಿದುಕೊಂಡರೆ ಅತ್ಯಂತ ಉಪಯುಕ್ತ ಎಂದರು.

ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಜಯಂತ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಧನರಾಜ್ ವೇದಿಕೆಯಲ್ಲಿದ್ದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular