ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕಂಪನಿಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಸುಮಾರು ೭೫೨ ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಈಕ್ವಿಟಿ ಷೇರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಇಂದು ತಿಳಿಸಿದೆ.
ಪಿಎಂಎಲ್‌ಎ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣವನ್ನು ಇ.ಡಿ ತನಿಖೆ ಮಾಡುತ್ತಿದ್ದು, ಪಂಚರಾಜ್ಯ ಚುನಾವಣೆಗಳು ನಡೆಯುತ್ತಿರುವುದರಿಂದ ಇ.ಡಿ ಯ ಈ ಕ್ರಮ ಕಾಂಗ್ರೆಸ್ ಪಕ್ಷದಲ್ಲಿ ಆಘಾತ ಮೂಡಿಸಿದೆ. ಕಾಂಗ್ರೆಸ್ ನಾಯಕರ ಬೆಂಬಲಿತ ನ್ಯಾಷನಲ್ ಹೆರಾಲ್ಡ್ ಸ್ಥಿರಾಸ್ತಿಗಳು ದೆಹಲಿ ಕಚೇರಿ ಮತ್ತು ಲಖನೌ ನಗರಕ್ಕೆ ಸೇರಿದವು ಎಂದು ಇ.ಡಿ ತಿಳಿಸಿದೆ. ಪ್ರಕರಣದಲ್ಲಿ ಕಾಂಗ್ರೆಸ್‌ನ ಷೇರುದಾರರು ಮತ್ತು ದಾನಿಗಳನ್ನು ಎಜೆಎಲ್‌ನ (ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮಾತೃ ಸಂಸ್ಥೆ) ಪದಾಧಿಕಾರಿಗಳು ಮತ್ತು ಪಕ್ಷದವರು ವಂಚಿಸಿದ್ದಾರೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ಆರೋಪಿಸಿದೆ.
ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡರಾಗಿದ್ದ ದಿ.ಮೋತಿ ಲಾಲ್ ವೋರಾ, ದಿ.ಅಸ್ಕರ್ ಫರ್ನಾಂಡಿಸ್ ಮತ್ತು ಪತ್ರಕರ್ತ ಸುಮನ್ ದುಬೆ, ದೂರಸಂಪರ್ಕ ಎಂಜಿನಿಯರ್ ಸ್ಯಾಮ್ ಪಿತ್ರೊಡ ಮತ್ತು ಯಂಗ್ ಇಂಡಿಯಾ ಲಿಮಿಟೆಡ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಈ ತನಿಖೆಯನ್ನು ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ ೨೦೧೫ರ ಆಗಸ್ಟ್ ೧೮ರಂದು ತಾಂತ್ರಿಕ ಕಾರಣಗಳಿಂದ ತನಿಖೆಯನ್ನು ನಿಲ್ಲಿಸುವುದಾಗಿ ಹೇಳಿತ್ತು. ಈ ತನಿಖೆಯನ್ನು ಮತ್ತೆ ಆರಂಭಿಸುವುದಾಗಿ ಇಡಿ ೨೦೧೫ರ ಸೆಪ್ಟೆಂಬರ್ ೧೮ರಂದು ಪ್ರಕಟಿಸಿತ್ತು. ಇದೀಗ ತನಿಖೆ ನಡೆಯುತ್ತಿದೆ.