ಬೆಂಗಳೂರು: ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 79 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು.
79ನೇ ಸ್ವಾತಂತ್ರ್ಯೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ತೆರೆದ ಜೀಪ್ನಲ್ಲಿ ಪೆರೇಡ್ ವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರ ಮಾಡಿದರು.
ಬಳಿಕ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ಸಮಾರಂಭದಲ್ಲಿ ರಾಜ್ಯ ಸಂಪುಟ ಸಚಿವರು, ರಾಜ್ಯದ ಶಾಸಕರು, ಅಧಿಕಾರಿಗಳು ಹಾಗೂ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ 8 ಸಾವಿರ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಮೆರಗು ಪಡೆದುಕೊಂಡವು. ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್ ಎಫ್, ಗೋವಾ ಪೊಲೀಸ್ ತಂಡ ಸೇರಿ ವಿವಿಧ ಇಲಾಖೆಯ 35 ತುಕಡಿಗಳಲ್ಲಿ 1,150 ಮಂದಿಯಿಂದ ಪಥ ಸಂಚಲನ ಹಾಗೂ ಸರ್ಕಾರಿ ಮತ್ತು ಬಿಬಿಎಂಪಿಯ 1,150 ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಪೊಲೀಸ್ ಸಮೂಹ ವಾದ್ಯಮೇಳದ 253 ಅಧಿಕಾರಿ, ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿತು.