ಬೆಂಗಳೂರು: ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ರಾಜ್ಯದ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಂಗಳವಾರವೂ ಭಾರೀ ಗಾಳಿ ಸಹಿತ ಮುಂಗಾರು ಪೂರ್ವ ಮಳೆ ಸುರಿದಿದ್ದು, ಸಿಡಿಲಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಧಾರವಾಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ರಾಮನಗರ, ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕಾರವಾರ, ಕುಮಟಾ, ಗೋಕರ್ಣ, ಅಂಕೋಲಾ ಹಾಗೂ ಉಡುಪಿ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಶೃಂಗೇರಿ ತಾಲೂಕಿನಲ್ಲಿ ಅಬ್ಬರದ ಮಳೆ ಸುರಿದಿದೆ. ಭಾರೀ ಗಾಳಿ ಮಳೆಗೆ ಹಲವೆಡೆ ಮರಗಳು ಉರುಳಿ ಬಿದ್ದು, ಆಸ್ತಿಪಾಸ್ತಿ ಹಾನಿಯಾಗಿದೆ. ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ತಂಪು ಉಂಟಾಗಿದ್ದು, ಬಿಸಿಲಲ್ಲಿ ಒಣಗುತ್ತಿದ್ದ ಅಡಕೆ, ಕಾಫಿ ತೋಟಗಳಿಗೆ ಜೀವಕಳೆ ಬಂದಿದೆ.