ಬೆಂಗಳೂರು: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧವಿದ್ದರೂ ಮೈಸೂರು,ಮಂಡ್ಯ ಭಾಗದಲ್ಲಿ ಗರ್ಭಪಾತ ಮಾಡಿಸುತ್ತಿದ್ದ ಭಾರೀ ಜಾಲವನ್ನೇ ಬೇಧಿಸಿರುವ ಬೆಂಗಳೂರು ಪೊಲೀಸರು ಈವರೆಗೂ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಮೂವರು ವೈದ್ಯರು. ಮೈಸೂರು ಮೂಲದ ಪ್ರಮುಖ ಆರೋಪಿ ಡಾ.ಚಂದನ್ ಬಲ್ಲಾಳ್ ಅವರನ್ನು ಬಂಧಿಸಲಾಗಿದೆ. ಒಂದೆರಡು ದಿನದ ಹಿಂದೆಯಯೇ ಇತರನ್ನು ಬಂಧಿಸಲಾಗಿತ್ತು.
ಮೈಸೂರಿನ ಮಾತಾ ಆಸ್ಪತ್ರೆಯ ಮುಖ್ಯಸ್ಥ ಡಾ.ಚಂದನ್ ಬಲ್ಲಾಳ್, ಇದಕ್ಕೆ ಸಹಕರಿಸುತ್ತಿದ್ದ ತಮಿಳುನಾಡು ಮೂಲದ ವೈದ್ಯ ಡಾ.ತುಳಸಿರಾಮ್, ಮಹಿಳೆಯರನ್ನು ಗುರುತಿಸಿ ಕರೆ ತರುತ್ತಿದ್ದ ವಿರೇಶ್, ನವೀನ್‌ಕುಮಾರ್, ನಯನ್‌ಕುಮಾರ್ ಹಾಗೂ ಶಿವಲಿಂಗೇಗೌಡ, ಮಾತಾ ಆಸ್ಪತ್ರೆ ವ್ಯವಸ್ಥಾಪಕಿ ಮೀನಾ ಹಾಗೂ ಸ್ವಾಗತಕಾರ್ತಿ ರಿಜ್ಮಾ ಖಾನಂ ಬಂಧಿತ ಇತರರು.
ಕೆಲ ದಿನಗಳ ಹಿಂದೆ ಕಾರೊಂದರಲ್ಲಿ ಗರ್ಭೀಣಿಯನ್ನು ಬೆಂಗಳೂರಿಂದ ಮಂಡ್ಯದ ಕಡೆಗೆ ಕರೆದುಕೊಂಡು ಹೋಗುತ್ತಿದ್ದುದನ್ನು ಗಮನಿಸಿದ ಬೈಯಪ್ಪನಹಳ್ಳಿ ಪೊಲೀಸರು ಹಿಂಬಾಲಿಸಿದ್ದರು. ಆಗ ಈ ಜಾಲ ಇರುವುದು ಬಯಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಈ ಜಾಲ ಬೇಧಿಸಲು ತಂಡವನ್ನು ರಚಿಸಿದ್ದರು. ಬೆಂಗಳೂರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳು, ಉತ್ತರ ಕರ್ನಾಟಕದ ಭಾಗದಿಂದಲೂ ವೀರೇಶ ಮತ್ತವರ ತಂಡ ಮಹಿಳೆಯರನ್ನು ಗುರುತಿಸಿ ಗರ್ಭಪಾತಕ್ಕೆ ಕರೆ ತರುತ್ತಿತ್ತು. ಕೆಲವರು ಭ್ರೂಣ ಪತ್ತೆಗೂ ಬರುತ್ತಿದ್ದರು. ಆನಂತರ ಹೆಣ್ಣು ಭ್ರೂಣ ಹತ್ಯೆಯನ್ನು ಮಾಡುತ್ತಿದ್ದರು. ಇದಕ್ಕೆ ಅವರು ನಿಗದಿತ ಹಣ ಪಡೆಯುತ್ತಿತ್ತು.
ಮೈಸೂರಿನ ಮಾತಾ ಆಸ್ಪತ್ರೆಯಲ್ಲದೇ ಮಂಡ್ಯದ ಕೆಲವು ಕಡೆಯೂ ಇವರು ಈ ಚಟುವಟಿಕೆ ನಡೆಸುತ್ತಿದ್ದರು. ಮಂಡ್ಯದ ಆಲೆಮನೆಯೊಂದರಲ್ಲೂ ಸ್ಕ್ಯಾನಿಂಗ್ ಯಂತ್ರ ಇರಿಸಿದ್ದರು. ಹಲವು ವರ್ಷದಿಂದ ಇದು ನಡೆದಿತ್ತು. ಬೈಯಪ್ಪನಹಳ್ಳಿ ಪೊಲೀಸರು ವೀರೇಶ್‌ನನ್ನು ಬಂಧಿಸಿದಾಗ ಈ ಎಲ್ಲವೂ ಬಯಲಾಗಿದೆ ಎಂದು ಬೆಂಗಳೂರು ಪೂರ್ವ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಒಬೊಬ್ಬರನ್ನೇ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಮಾರು ೯೦೦ ಭ್ರೂಣ ಹತ್ಯೆಯನ್ನು ಎರಡು ವರ್ಷದ ಅವಧಿಯಲ್ಲಿ ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಸಿಬ್ಬಂದಿ ಬಂಧನದ ವಿಚಾರ ತಿಳಿದು ಡಾ.ಚಂದನ್ ಬಲ್ಲಾಳ್ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿತ್ತು. ಶನಿವಾರ ಚಂದನ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಅವರಿಂದ ನಿಖರ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.