ಬೆಂಗಳೂರು: ಚುನಾವಣಾ ವೆಚ್ಚವಾಗಿ ಅಭ್ಯರ್ಥಿಗಳು 95 ಲಕ್ಷ ರೂಪಾಯಿ ಖರ್ಚು ಮಾಡಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶನಿವಾರ ಹೇಳಿದರು.
ಶನಿವಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹತ್ತಿರ ಬಂದಿದ್ದು ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಬರುವ ಮಾಹಿತಿಗಳ ಬಗ್ಗೆ ರಾಜಕೀಯ ಪ್ರತಿನಿಧಿಗಳಿಗೆ ನಿಯಮಿತವಾಗಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಚುನಾವಣಾ ವೆಚ್ಚಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ನಿರ್ವಹಣೆ ಮಾಡಬೇಕು. ಚುನಾವಣಾಧಿಕಾರಿಗಳಿಗೂ ಮಾಹಿತಿ ನೀಡಬೇಕು. ಅಭ್ಯರ್ಥಿಗಳು ಚುನಾವಣಾ ವೆಚ್ಚವಾಗಿ 95 ಲಕ್ಷ ರೂ. ಖರ್ಚು ಮಾಡಬಹುದು ಎಂದು ಹೇಳಿದರು.
ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಮೊದಲು ಮಾಡುವ ವೆಚ್ಚವನ್ನು ಪಕ್ಷಗಳ ವೆಚ್ಚವೆಂದು ಪರಿಗಣಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಯಿಂದ ಮತ ಎಣಿಕೆ ದಿನಾಂಕದವರೆಗೆ ತಗಲುವ ವೆಚ್ಚವನ್ನು ಅಭ್ಯರ್ಥಿಯ ವೆಚ್ಚವೆಂದು ಪರಿಗಣಿಸಲಾಗುವುದು.
ಚುನಾವಣಾ ಕಚೇರಿಗಳಿಂದ ದೈನಂದಿನ ನೋಂದಣಿ, ರಿಜಿಸ್ಟರ್ ಮತ್ತು ಬ್ಯಾಂಕ್ ರಿಜಿಸ್ಟರ್ ಸೇರಿದಂತೆ ಮೂರು ನಮೂನೆಗಳಲ್ಲಿ ವಿವರಗಳನ್ನು ನೀಡಲು ಅಭ್ಯರ್ಥಿಗಳಿಗೆ ತಿಳಿಸಲಾಗಿದ್ದು, ಚುನಾವಣಾ ವೆಚ್ಚದ ಲೆಕ್ಕಾಚಾರವನ್ನು ಈ ರಿಜಿಸ್ಟರ್‌ಗಳಲ್ಲಿ ನಮೂದಿಸಬೇಕಾಗುತ್ತದೆ. ಪ್ರತಿ ಖರ್ಚಿಗೆ ಸಂಬಂಧಿಸಿದ ವೋಚರ್‌ಗಳು, ಬಿಲ್‌ಗಳು ಮತ್ತು ಇತರ ದಾಖಲೆಗಳನ್ನು ನಿರ್ವಹಿಸಬೇಕು. ತಾರಾ ಪ್ರಚಾರಕರೊಂದಿಗೆ ನಡೆಸುವ ಪ್ರಚಾರ ಸಭೆಗಳು ಮತ್ತು ಅಭ್ಯರ್ಥಿಯ ಪರವಾಗಿ ನಡೆಯುವ ಪ್ರಚಾರಗಳಲ್ಲಿ ಅಭ್ಯರ್ಥಿ ವೇದಿಕೆ ಹಂಚಿಕೊಂಡರೆ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಯ ವೆಚ್ಚವೆಂದೇ ಪರಿಗಣಿಸಲಾಗುತ್ತದೆ ಎಂದು ಹೇಳಿದರು.