ಮೈಸೂರು: ಈಗಿನ ಆಧುನಿಕ ಕಾಲದ ಆಳುವವರಿಗೆ ಸಾಮಾನ್ಯ ಜ್ಞಾನವೂ ಇಲ್ಲವಾಗಿದೆ. ಅವರ ಮಿದುಳು ಕೊಳೆತುಹೋಗಿದೆ. ಹೀಗಾಗಿಯೇ ಕೋತಿಗಳು ಸೇತುವೆ ಕಟ್ಟಿವೆ ಎಂದು ಮೂರ್ಖತನದ ಮಾತುಗಳನ್ನು ಹೇಳುತ್ತಾರೆ ಎಂದು ಲೇಖಕ, ವಿಮರ್ಶಕ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ಕುರಿತು ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಎಂದಿಗೂ ಕನ್ನಡ ವಿವೇಕ ಮರೆಯಬಾರದು. ೧೨ನೇ ಶತಮಾನದ ಸಾಹಿತಿಗಳಿಗೆ ಸಾಮಾನ್ಯ ಜ್ಞಾನವಿತ್ತು. ಇದುವೇ ಕನ್ನಡಿಗರ ವಿವೇಕವಾಗಿದೆ. ಆದರೆ, ಈಗ ಪುರಾಣ ಇತಿಹಾಸವಾಗಿದೆ, ಇತಿಹಾಸ ಪುರಾಣವಾಗುತ್ತಿದೆ. ಹಾಗೆ ಅಧಯನ, ಓದಲಾಗುತ್ತಿದೆ. ಈಗಿನವರಿಗೆ ಕಲೆ, ಸಾಹಿತ್ಯ ಗೊತ್ತಿಲ್ಲ. ಹೀಗಾಗಿ, ಪ್ರದರ್ಶಕ ಕಲೆ ಕುರಿತು ಕೆಟ್ಟ ಮಾತುಗಳು ಕೇಳಿ ಬರುತ್ತಿವೆ. ಉತ್ತೇಜನ, ಪ್ರೇರಣೆ ದೊರೆಯುವುದು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಲೆ, ನಾಟಕ, ಸಾಹಿತ್ಯಕ್ಕೆ ಬಹಳ ಮಹತ್ವವಿದೆ. ಪ್ರದರ್ಶಕ ಕಲೆಗಳು ಜೀವನ ಕ್ರಮ. ಬಳಸುವ ಭಾಷೆ ಶ್ರೀಮಂತವಾಗಿರಬೇಕು. ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಮತ್ತೊಂದು ಹಂತಕ್ಕೆ ತಲುಪಿಸಬೇಕು. ಗಣಿತದಲ್ಲಿ ೨+೨=೪ ಆಗಲಿದೆ. ಆದರೆ, ಸಾಹಿತ್ಯದಲ್ಲಿ ೨+೨= ೬ ಸಹ ಆಗಬಹುದು. ಅದಕ್ಕೆ ಕವಿಯನ್ನು ಬ್ರಹ್ಮ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದರು.
ಕವಿ ಹೊಸ ಜಗತ್ತು ನೋಡುತ್ತಾನೆ. ವಾಸ್ತವ ಮುರಿದು ಹೊಸದಾಗಿ ಕಟ್ಟುತ್ತಾನೆ. ಈ ಕೆಲಸ ಸಾಮಾನ್ಯವಲ್ಲ. ಆದ್ದರಿಂದ ಯಾರೂ ತಮ್ಮನ್ನು ಗುರುತಿಸದಿದ್ದರೂ, ಸನ್ಮಾನ-ಪ್ರಶಸ್ತಿ ದೊರೆಯದಿದ್ದರೂ ಭಾಷಾಗಾರರು ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕವಿ ಕನಸುಗಳು ವಾಸ್ತವ ಎನ್ನುವ ಮೂರ್ಖರು ಇದ್ದಾರೆ. ಅದೇ ಇತಿಹಾಸ ಎಂದು ಪ್ರತಿಪಾದಿಸುತ್ತಿದ್ದಾರೆ. ಇದರಿಂದ ಕಲೆ, ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆಯಾಗಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಅನಿತಾ ವಿಮ್ಲಾ ಬ್ರಾಗ್ಸ್ ಹಾಗೂ ಇತರರಿದ್ದರು.