ನವದೆಹಲಿ: ದೇಶದ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೆಹಲಿಯಲ್ಲಿ ವಿಡಿಯೊ ಕಾನ್ಪರೆನ್ಸ್ ಮೂಲಕ ಏಕಕಾಲಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಅಮೃತ ಭಾರತ್ ನಿಲ್ದಾಣ ಅಭಿವೃದ್ಧಿ ಯೋಜನೆಯ ಮೊದಲ ಭಾಗದಲ್ಲಿ ಈ ಎಲ್ಲ 508 ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಇದಕ್ಕಾಗಿ ₹ 24,470 ಕೋಟಿ ವ್ಯಯಿಸಲಾಗುತ್ತಿದ್ದು, ಒಟ್ಟು 1,309 ರೈಲು ನಿಲ್ದಾಣಗಳ ನವೀಕರಣಕ್ಕೆ ಕ್ರಮವಹಿಸಲಾಗಿದೆ.
ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18 ನಿಲ್ದಾಣಗಳು ಸೇರಿವೆ. ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ನಿಲ್ದಾಣಗಳು ಈ ಯೋಜನೆಯಡಿ ಅಭಿವೃದ್ಧಿ ಹೊಂದಲಿವೆ.
ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ ಅವರು, ಈ ಯೋಜನೆಯಲ್ಲಿ ನವೀಕರಣಗೊಳ್ಳುವ ರೈಲು ನಿಲ್ದಾಣಗಳು ಆಯಾ ನಗರದ ಪರಂಪರೆ ಜೊತೆ ದೇಶದ ಉನ್ನತ ಐತಿಹಾಸಿಕ ಪರಂಪರೆಯನ್ನು ಎತ್ತಿ ಹಿಡಿಯಲಿವೆ ಎಂದು ಹೇಳಿದರು. ಇದು ದೀರ್ಘಕಾಲದ ಯೋಜನೆಯಾಗಿದ್ದು, ಇದಕ್ಕಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಇದೊಂದು ಮೈಲಿಗಲ್ಲು ಎಂದು ಹೇಳಿದರು. ಈ ವೇಳೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಇದ್ದರು.
ಕರ್ನಾಟಕದಲ್ಲಿ ಯಾವ ನಿಲ್ದಾಣಗಳ ಅಭಿವೃದ್ಧಿ?
ಆಲಮಟ್ಟಿ, ಅಳ್ನಾವರ, ಅರಸೀಕೆರೆ, ಬಾದಾಮಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಕಂಟೋನ್ಮೆಂಟ್, ಬಂಗಾರಪೇಟೆ, ಬಂಟ್ವಾಳ, ಬೆಳಗಾವಿ, ಬೀದರ್, ವಿಜಯಪುರ, ಚಾಮರಾಜನಗರ, ಚನ್ನಪಟ್ಟಣ, ಚನ್ನಸಂದ್ರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಗಂಗಾಪುರ ರಸ್ತೆ, ಘಟಪ್ರಭಾ, ಗೋಕಾಕ್ ರಸ್ತೆ, ಹರಿಹರ, ಹಾಸನ, ಹೋಸಪೇಟೆ, ಕಲಬುರ್ಗಿ, ಕೆಂಗೇರಿ, ಕೊಪ್ಪಳ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕೆ.ಆರ್.ಪುರ, ಮಲ್ಲೇಶ್ವರ, ಮಾಲೂರು, ಮಂಡ್ಯ, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಮುನಿರಾಬಾದ್, ಮೈಸೂರು, ರಾಯಚೂರು, ರಾಮನಗರ, ರಾಣೆಬೆನ್ನೂರು, ಸಾಗರ ಜಂಬಗಾರು, ಸಕಲೇಶಪುರ, ಶಹಾಬಾದ್, ಶಿವಮೊಗ್ಗ, ಹುಬ್ಬಳ್ಳಿ ಜಂಕ್ಷನ್, ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ, ತಿಪಟೂರು, ತುಮಕೂರು, ವಾಡಿ, ವೈಟ್‌ಫೀಲ್ಡ್, ಯಾದಗಿರಿ, ಯಶವಂತಪುರ, ಚಿಕ್ಕೋಡಿ ರಸ್ತೆ ಜಂಕ್ಷನ್.