ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಆಗಾಗ ತನ್ನ ಆಡಳಿತ ವೈಫಲ್ಯ ಪ್ರದರ್ಶಿಸುತ್ತಲೇ ಇದ್ದು, ಇದೀಗ ಖುದ್ದು ವಿಧಾನಸಭೆ ಸ್ಪೀಕರ್ ಅವರೇ ಸಿಟ್ಟಿಗೆದ್ದು ಸದನದಿಂದ ಹೊರ ನಡೆದು ಆಡಳಿತದ ಅಸಮರ್ಥತೆಯನ್ನು ಮತ್ತೊಮ್ಮೆ ತೆರೆದಿಟ್ಟಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಹಾಗೂ ಕೆಲ ಸಚಿವರು ಗೈರು ಇರುವುದನ್ನು ಕಂಡು ಸ್ಪೀಕರ್ ಯು.ಟಿ.ಖಾದರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆದುರೇ ಸಭಾತ್ಯಾಗ ಮಾಡಿರುವುದು ಈ ಸರ್ಕಾರದ ಅಧೋಗತಿಗೆ ಹಿಡಿದ ಕೈಗನ್ನಡಿ ಎಂದು ತಿಳಿಸಿದರು.
ಇನ್ನೂ ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಅನೇಕ ಸಚಿವರು ವಿಫಲರಾಗಿದ್ದಾರೆ ಎಂದರೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ನಿಜಕ್ಕೂ ಶೋಚನೀಯ. ಮುಖ್ಯಮಂತ್ರಿಗಳಿಗೆ ಸಚಿವರು ಮತ್ತು ಆಡಳಿತದ ಮೇಲೆ ಹಿಡಿತವೇ ಇಲ್ಲ ಎನ್ನಬೇಕಾಗುತ್ತದೆ ಎಂದರು.
ರಾಜ್ಯದ ಸಚಿವರು ಬಜೆಟ್ ಕಲಾಪದಲ್ಲೂ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲಾರದ ಸ್ಥಿತಿ ತಲುಪಿದ್ದು, ಸಕಾಲಕ್ಕೆ ಆಧಿವೇಶನಕ್ಕೆ ಹಾಜರಾಗುವುದೂ ಇಲ್ಲ ಎಂದರೆ ಇವರಿಗೆ ಆಡಳಿತದ ಮೇಲೆ ಆಸಕ್ತಿಯೇ ಇಲ್ಲ. ಬಹುಶಃ ಸರ್ಕಾರ ನಡೆಸುವುದರ ಬಗೆಗೆ ನಿರಾಸಕ್ತಿ ಇದ್ದಂತಿದೆ ಎಂದು ಲೇವಡಿ ಮಾಡಿದ್ದಾರೆ.
ಪ್ರಸ್ತುತದಲ್ಲಿ ಕೆಲ ಸಚಿವರು, ಶಾಸಕರುಗಳು ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿಯೇ ಹೆಚ್ಚು ಸಕ್ರಿಯರಾದಂತೆ ಕಾಣುತ್ತದೆ. ಇವರಿಗೆ ರಾಜ್ಯದ ಜನರ ಹಿತ, ರಾಜ್ಯದ ಅಭಿವೃದ್ಧಿಗಿಂತ ಗುಂಪುಗಾರಿಕೆ, ದೆಹಲಿ ಮತ್ತು ವಿದೇಶಿ ಪ್ರವಾಸವೇ ಪ್ರಮುಖವಾದಂತಿದೆ. ಎಲ್ಲಿ ಬೇಕಲ್ಲಿ ಪ್ರವಾಸಕ್ಕೆ ಸಮಯವಿರುವ ಮಂತ್ರಿಗಳಿಗೆ ಸದನಕ್ಕೆ ಬರಲು ಸಮಯ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.



