ಬೆಂಗಳೂರು : ಭಾರತದ ಎರಡನೇ ಅತಿದೊಡ್ಡ ಸಹಕಾರ ಮಹಾಮಂಡಳಿ ಹಾಗೂ ಕರ್ನಾಟಕದ ಹೆಮ್ಮೆಯ ಕೆಎಂಎಫ್ ನಂದಿನಿ ಮಾ.28ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ನ 2026 ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಡೈರಿ ಪಾರ್ಟ್ನರ್ ಆಗಿದ್ದು, ಐಪಿಎಲ್ 2026 ಗಾಗಿ ನಂದಿನಿ ಬ್ರ್ಯಾಂಡ್ ಮತ್ತು ಆರ್‌ಸಿಬಿ ನಡುವೆ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿದೆ.
ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇನ್ನೂ ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ ಆರ್‌ಸಿಬಿ ತಂಡದ ಜೊತೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿದ್ದು, ರನ್ ಮಿಷಿನ್ ವಿರಾಟ್ ಕೊಹ್ಲಿ ಸೇರಿ ಮೂರು ಆಟಗಾರರ ಭಾವಚಿತ್ರ ಬಳಸಲು 1 ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಬರೋಬ್ಬರಿ 4.80 ಕೋಟಿ ರೂ. ಕೆಎಂಎಫ್ ವೆಚ್ಚ ಮಾಡಿದೆ. ಅತಿ ಹೆಚ್ಚಿನ ಫ್ಯಾನ್ಸ್ ಗಳನ್ನ ಹೊಂದಿರುವ ಆರ್‌ಸಿಬಿ ತಂಡಕ್ಕೆ ಹೆಮ್ಮೆಯ ನಂದಿನಿ ಪಾರ್ಟ್ನರ್ ಆಗಿರುವ ಬಗ್ಗೆ ಕೆಎಂಎಫ್ ಎಂ.ಡಿ ಶಿವಸ್ವಾಮಿ ಖುಷಿ ವ್ಯಕ್ತಪಡಿಸಿದ್ದಾರೆ.
ನಂದಿನಿ ಉತ್ಪನ್ನವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಆರ್‌ಸಿಬಿ ಜೊತೆಗೆ ನಮ್ಮ ಮಾರ್ಕೆಟ್ ವಿಸ್ತರಣೆಯಾಗಲಿದ್ದು, ಕಳೆದ 2024 ರಿಂದ ಆರ್‌ಸಿಬಿ ಜೊತೆಗೆ ಈ ಪ್ರಯತ್ನ ನಡೆಸಲಾಗಿತ್ತು. ಕ್ರೀಡೆಗಳಲ್ಲಿ ನಂದಿನಿ ಪ್ರಾಯೋಜಕತ್ವದಿಂದ ಯುವಜನರನ್ನ ಸೆಳೆಯುವ ಉದ್ದೇಶದಿಂದ ಈ ಪ್ರಾಯೋಜಕತ್ವ ಸಹಾಯವಾಗಲಿದೆ. ಸದ್ಯ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ದೇವದತ್ ಪಡಿಕಲ್ ಭಾವಚಿತ್ರವನ್ನ ಪ್ರಾಡಕ್ಟ್ ಪ್ಯಾಕ್ ಮೇಲೆ ಅನಾವರಣ ಮಾಡಲಾಗಿದೆ.
ಒಟ್ಟು 4 ಕೋಟಿ 80 ಲಕ್ಷ ರೂ. ಟೆಂಡರ್ ಪಾಯೋಜಕತ್ವ ಇದಾಗಿದ್ದು, ಆರ್‌ಸಿಬಿ ಮೊದಲ ಪಂದ್ಯ ಇದೇ 28 ರಿಂದ ಶುರುವಾಗಲಿದೆ. ಹೀಗಾಗಿ ಮಾ.28 ರಿಂದ 1 ವರ್ಷದವರೆಗೆ ಈ ಒಪ್ಪಂದ ಇರಲಿದೆ ಎಂದು ಎಂಡಿ ಶಿವಸ್ವಾಮಿ ತಿಳಿಸಿದ್ದಾರೆ.
ಐಪಿಎಲ್ ಹಾಲಿ ಚಾಂಪಿಯನ್ ಆರ್‌ಸಿಬಿ ಕೊನೆಗೂ ಮಾರಾಟವಾಗಿದ್ದು, ಕುಮಾರ್ ಮಂಗಲಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ (ಒಕ್ಕೂಟ) ಮಂಗಳವಾರ ಅದರ ಹೊಸ ಮಾಲೀಕರಾಗಿದ್ದಾರೆ. ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಸುಮಾರು 1.78 ಶತಕೋಟಿ ಡಾಲರ್ ( 16,000 ಕೋಟಿಗಿಂತ ಹೆಚ್ಚು) ಪಾವತಿಸಲಿದೆ ಎಂದು ತಿಳಿದುಬಂದಿದೆ.
ಆರ್ ಸಿಬಿಯ ಶೇ.100 ರಷ್ಟು ಮಾಲೀಕತ್ವದ ಪಾಲು ಪಡೆಯಲು ಈ ಕಂಪನಿಗಳು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ನೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ ಫ್ರಾಂಚೈಸಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.



