ಬೆಂಗಳೂರು : ವಿರೋಧ ಪಕ್ಷದವರು ನಮ್ಮ ಬಜೆಟ್‌ನ್ನು ಎಷ್ಟೇ ಟೀಕಿಸಿದರೂ, ಮಾವಿನ ಹಣ್ಣು ಬೇವಿನ ಹಣ್ಣು ಆಗಲು ಸಾಧ್ಯವಿಲ್ಲ. ಬಜೆಟ್ ಖಾಲಿ ಚೊಂಬು ಎಂಬ ಟೀಕಿಸಲಾಗಿದೆ. ಆದರೆ ಕರ್ನಾಟಕಕ್ಕೆ ಖಾಲಿ ಚೊಂಬು ನೀಡದೇ, ತುಂಬಿದ ಚೊಂಬನ್ನೇ ನೀಡಲಾಗಿದೆ. ನಮ್ಮ ಬಜೆಟ್ ತುಂಬಿದ ಕೊಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ವಿಧಾನಸಭೆಯಲ್ಲಿ ಬಜೆಟ್ ಕುರಿತು ನಡೆದ ಚರ್ಚೆಗೆ ಉತ್ತರಿಸಿದರು. ಅವರ ಉತ್ತರದ ಪ್ರಮುಖ ಅಂಶಗಳು: 21 ಜನ ವಿರೋಧಪಕ್ಷದವರು, ಆಡಳಿತ ಪಕ್ಷದವರು ಜೆಡಿಎಸ್ ಹಾಗೂ ಉಳಿದವರು ಸೇರಿದಂತೆ ಒಟ್ಟು 50 ಜನ ಮಾತನಾಡಿದ್ದು,ಒಟ್ಟು 24 ಗಂಟೆ 45 ನಿಮಿಷ ಚರ್ಚೆ ನಡೆಸಲಾಗಿದೆ. ನಾನು 17 ಬಜೆಟ್‌ಗಳನ್ನು ಮಂಡಿಸಿದ್ದು, ಬಜೆಟ್ ಮೇಲೆ 50 ಜನ ಮಾತನಾಡಿದ್ದು, ಇದೇ ಮೊದಲು. ಚರ್ಚೆಯಲ್ಲಿ ಭಾಗವಹಿಸಿ, ಬಜೆಟನ್ನು ಟೀಕೆ, ಸ್ವಾಗತ, ವಿಮರ್ಶೆ ಮಾಡಿದ ಎಲ್ಲರಿಗೂ ನನ್ನ ಅಭಿನಂದನೆಗಳು.
ವಿರೋಧ ಪಕ್ಷದವರು ಸೋಷಿಯಲ್ ಮೀಡಿಯಾಕ್ಕೆ ಹೂರಣ ನೀಡಲು ಬಹಳ ಕಸರತ್ತು ಮಾಡಿ ಪದಪುಂಜಗಳನ್ನು ಬಳಸಿದ್ದಾರೆ. ವಿರೋಧ ಪಕ್ಷದ ನಾಯಕರು ಆಯವ್ಯಯದ ಬಗ್ಗೆ ಸ್ಥೂಲವಾಗಿ ಅಧ್ಯಯನ ಮಾಡದೇ, ಪ್ರತಿಕ್ರಿಯೆ ನೀಡಿದ್ದಾರೆಯೇ ಹೊರತು, ಆಳವಾದ ಅಧ್ಯಯನ ನಡೆಸಿಲ್ಲ ಎಂದು ಕಂಡುಬರುತ್ತದೆ.
ಇನ್ನೂ ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳಲ್ಲಿ ಹಾಗೂ ಆರ್ಥಿಕ ತಜ್ಞರು, ಎಲ್ಲ ಸಮುದಾಯಗಳನ್ನು ತಲುಪಿದ ಬಜೆಟ್, ರಾಜ್ಯದ ಸುಸ್ಥಿರ ಮತ್ತು ಸಶಕ್ತ 11 ಜಿ ಮಾದರಿಯ ಬಜೆಟ್, ನೀರಾವರಿ ಮತ್ತು ಮೂಲಸೌಕರ್ಯಕ್ಕೆ ಒತ್ತು, ಜನಪ್ರಿಯತೆ ಮತ್ತು ವಾಸ್ತವದ ಬಜೆಟ್ , ರಾಜ್ಯದ ಬೊಕ್ಕಸವನ್ನು ಸುಸ್ಥಿರವಾಗಿಡುವ ದೂರದೃಷ್ಟಿಯ ಬಜೆಟ್, ನಿರುದ್ಯೋಗ ನಿವಾರಣೆ, ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯದ ಮೇಲೆ ಕೇಂದ್ರಿತ ಹಾಗೂ ಎಲ್ಲರನ್ನೊಳಗೊಂಡ ಬಜೆಟ್, ಹೂಡಿಕೆಗಳಿಗೆ ಹಾಗೂ ನವೋದ್ಯಮಿಗಳಿಗೆ ನೆರವಾಗುವ ಯೋಜನೆಗಳ ಬಜೆಟ್ ಎಂಬ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ.
ಅಲ್ಲದೆ, ರಾಜ್ಯದ ಈ ವರ್ಷದ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಷ್ಟಾಗಲಿದೆ. 2025-26ರಲ್ಲಿ ನಮ್ಮ ಬಜೆಟ್ ಗಾತ್ರ 4,09,549 ರೂಗಳಷ್ಟಿತ್ತು. ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ ಈ ಆಯವ್ಯಯವು 38,455 ಕೋಟಿ ರೂಗಳಷ್ಟು ಹೆಚ್ಚಿನ ಗಾತ್ರದ್ದಾಗಿದೆ. ಶೇ.9.4ರಷ್ಟು ಬೆಳವಣಿಗೆಯಾಗಿದ್ದು, ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6 ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ (2025 ರಲ್ಲಿ 50.65 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದರು. ಈ ವರ್ಷ 53.47 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ).
2025-26 ರಲ್ಲಿ ದೇಶದ ಜಿಡಿಪಿಯು ಸ್ಥಿರ ಬೆಲೆಗಳಲ್ಲಿ ಶೇ.7.4 ರಷ್ಟು ಬೆಳವಣಿಗೆ ದಾಖಲಿಸಿದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್‌ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವುದನ್ನು ಹೇಳುತ್ತದೆ. ಈ ಮೂಲಕ ರಾಜ್ಯದ ಆರ್ಥಿಕತೆಯನ್ನು ದೇಶದಲ್ಲಿಯೇ ನಂ.1 ಮಾಡುವತ್ತ ಹೆಜ್ಜೆಯಿಟ್ಟಿದ್ದೇವೆ.
ಇಷ್ಟೆಲ್ಲದರ ನಡುವೆ ನಮ್ಮ ವಿತ್ತೀಯ ಶಿಸ್ತನ್ನು ಹಾಳು ಮಾಡಿಲ್ಲ. ನಮ್ಮ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟಿರಲಿದೆ. ನಮ್ಮ ಜಿ.ಎಸ್.ಡಿ.ಪಿ ಈ ವರ್ಷ 33,05,500 ಕೋಟಿ ರೂ. ಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ.
ವಿತ್ತೀಯ ಶಿಸ್ತು ಕಾಪಾಡಲಾಗಿದೆ : ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ.ಗೆ ಎದುರಾಗಿ ಶೇ.24.94 ರಷ್ಟಿರಲಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರದ ಹೊಣೆಗಾರಿಕೆಗಳು ಜಿ.ಡಿ.ಪಿ.ಗೆ ಎದುರಾಗಿ ಶೇ.55.6 ರಷ್ಟಿದೆ.
ನಮ್ಮ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ರ ಒಳಗೆ ಇದೆ. ಮುಂದಿನ ವರ್ಷಕ್ಕೆ ಶೇ.2.95 ರಷ್ಟು ಇರಲಿದೆ ಎಂಬುದು ನಮ್ಮ ಅಂದಾಜಾಗಿತ್ತು. ಆದರೆ 2026-27ನೇ ಸಾಲಿಗೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟು ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
16 ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ರಾಜ್ಯಗಳು ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಶೇ.4.2 ರೊಳಗೆ ವಿತ್ತೀಯ ಕೊರತೆ ಹೊಂದಿರಬೇಕು. ಇದನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡಿಲ್ಲ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ.
ಬಜೆಟ್ ನ ಮೂಲಭೂತ ಅಂಶಗಳು , 2026-27 ನೇ ಆರ್ಥಿಕ ವರ್ಷದ ಬಜೆಟ್ ಗಾತ್ರ 4,48,0004 ಕೋಟಿ ರೂ., 2025-26 ಕ್ಕೆ ಬಜೆಟ್ ಗಾತ್ರ 4,09,549 ಕೋಟಿ ರೂ. ವಿತ್ತು. ಕಳೆದ ವರ್ಷಕ್ಕಿಂತ ಈ ಬಾರಿಯ ಬಜೆಟ್ 38455 ಕೋಟಿ ರೂ., ಶೇ. 9.4 ರಷ್ಟಾಗಿದ್ದು, ಇದು ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತವಿದಿದ್ದರೆ, ಈ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ.
ಇದನ್ನು ಕೇಂದ್ರಕ್ಕೆ ಹೋಲಿಸಿದರೆ , 26-27ರಲ್ಲಿ 53, 47,000 ಕೋಟಿ ಇದೆ. ಪ್ರಗತಿ 5.6% ರಷ್ಟಿದೆ. ಕರ್ನಾಟಕದ ಜಿಡಿಪಿಯು 2026-27 ಕ್ಕೆ 33,05,500 ಕೋಟಿ (8.1% ಪ್ರಗತಿ), ದೇಶದ ಜಿಡಿಪಿಯಲ್ಲಿ ಪ್ರಗತಿ 7.4% ರಷ್ಟು ಮಾತ್ರ. ದೇಶದ ಆರ್ಥಿಕ ಬೆಳವಣಿಗೆಗಿಂತ , ರಾಜ್ಯದ ಆರ್ಥಿಕತೆ ಬೆಳವಣಿಗೆ ಹೆಚ್ಚಿದೆ.
ವಿತ್ತೀಯ ಕೊರತೆ ಶೇ. 3 ರೊಳಗಿರಬೇಕು, ಒಟ್ಟು ಸಾಲ 25 %ರ ಜಿಡಿಪಿಯನ್ನು ಮೀರಬಾರದು ಎಂಬ ಆರ್ಥಿಕ ಶಿಸ್ತನ್ನು ತರಲು ಮಾನದಂಡಗಳನ್ನು ರಾಜ್ಯ ಸರ್ಕಾರ ಪೂರೈಸಿದೆ. ವಿತ್ತೀಯ ಕೊರತೆ 2.95 ರೊಳಗಿದ್ದು, ಸಾಲದ ಮೊತ್ತ 24.94% ರಷ್ಟಿದ್ದು, ಇದು 25 % ನ ಮಿತಿಯೊಳಗೆ ಇದೆ. ಬಜೆಟ್ ನಲ್ಲಿ ರೆವಿನ್ಯೂ ಸರ್ಪ್ಲಸ್ ಆಗದೇ ವಿತ್ತೀಯ ಕೊರತೆಯಾಗಿದೆ. ಇದಕ್ಕೂ ಪೂರಕ ಕಾರಣಗಳಿವೆ. ವಾಸ್ತವನ್ನು ತಿಳಿಸಲಾಗುತ್ತಿದೆಯೇ ಹೊರತು ಯಾರನ್ನೂ ದಾರಿ ತಪ್ಪಿಸುತ್ತಿಲ್ಲ. ಆದ್ದರಿಂದ ನಮ್ಮ ಆಯವ್ಯಯ, ಆರ್ಥಿಕ ಹೊಣೆಗಾರಿಕೆಯ ಮಾನದಂಡಗಳನ್ನು ಪಾಲಿಸಿದೆ.
ನಾನು ಮಂಡಿಸಿದ 17 ಆಯವ್ಯಯದಲ್ಲಿಯೂ ಆರ್ಥಿಕ ಶಿಸ್ತನ್ನೂ ಪಾಲಿಸಲಾಗಿದೆ. ಜನರಿಗೆ ಸಾಮಾಜಿಕ ನ್ಯಾಯ ನೀಡಿ, ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವುದು ಮುಖ್ಯ. ನಾವು ಅಧಿಕಾರದಲ್ಲಿದ್ದು, ಜನರಿಗೆ ಮಾಡು ಒಳಿತು ಅತ್ಯಂತ ಮುಖ್ಯವಾಗಿದೆ. ಮಹಿಳೆಯರು, ರೈತರು, ಕಾರ್ಮಿಕರು, ಹಿಂದುಳಿದವರು , ದೀನದಲಿತರಿಗೆ ಶಕ್ತಿ ತುಂಬಿರುವುದು ಮುಖ್ಯ.
ಡಾ.ಬಿ.ಆರ್.ಅಂಬೇಡ್ಕರ್ ಅವರು, ಸ್ವಾತಂತ್ರ್ಯ ಯಶಸ್ವಿಯಾಗಲು ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ದೊರೆಯಬೇಕೆಂದು ತಿಳಿಸಿದ್ದು, ಆಗ ಮಾತ್ರ ಸ್ವಾತಂತ್ರ್ಯ ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದರು. ಅಲ್ಲದೇ, ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದು, ಅಸಮಾನತೆಯನ್ನು ತೊಲಗಿಸದೇ, ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದಿದ್ದರು.



