ಮೈಸೂರು : ಆರ್‌ಎಸ್‌ಎಸ್ ಚಿಂತನೆಯ ಶೈಕ್ಷಣಿಕ ಅಧಿವೇಶನಕ್ಕೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗಕ್ಕೆ ಸರ್ಕಾರ ತಕರಾರು ತೆಗೆದಿದೆ. ಸರ್ಕಾರದ ಆಕ್ಷೇಪ ಬೆನ್ನಲ್ಲೇ ಕಾರ್ಯಕ್ರಮ ಸಹಯೋಗದಿಂದ ವಿವಿ ಹೊರಕ್ಕೆ ಬಂದಿದೆ.
ರಾಜ್ಯ ಮುಕ್ತ ವಿವಿ ಸಹಯೋಗ ಮತ್ತು ಹಣಕಾಸಿನ ನೆರವಿನೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ರಾಜ್ಯ ಮುಕ್ತ ವಿವಿ ಉದ್ದೇಶಕ್ಕೆ ಸಂಬಂಧ ಇಲ್ಲದ ಅಧಿವೇಶನ ಇದು. ಇದನ್ನು ರದ್ದು ಮಾಡಿ ಎಂದು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದರು. ಆದೇಶದ ಬೆನ್ನಲ್ಲೇ ಕಾರ್ಯಕ್ರಮದ ಸಹಯೋಗದಿಂದ ವಿವಿ ಹೊರಬಂದಿದೆ.
ಮೈಸೂರಿನ ರಾಜ್ಯ ಮುಕ್ತ ವಿವಿಯಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಶೈಕ್ಷಣಿಕ ಅಧಿವೇಶನ ಆಯೋಜಿಸಲಾಗಿತ್ತು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನೆನಪಿನ ಶೈಕ್ಷಣಿಕ ಕಾರ್ಯಕ್ರಮ ಇದಾಗಿತ್ತು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನಸಂಘದ ಅತಿ ಪ್ರಮುಖ ನಾಯಕರು.
ಆರ್‌ಎಸ್‌ಎಸ್ ಸಂಘಟನೆಯ ಜೊತೆ ಇರುವ ಪ್ರಜ್ಞಾ ಪ್ರವಾಹ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಫೌಂಡೇಶನ್‌ನಿಂದ ಮಾತ್ರ ಈಗ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಂದಿನಿಂದ ಮೂರು ದಿನ ಅಧಿವೇಶನಕ್ಕೆ ರಾಜ್ಯಪಾಲರು ಉದ್ಘಾಟನೆ ನೆರವೇರಿಸಲಿದ್ದಾರೆ.



