Wednesday, March 25, 2026
Google search engine

Homeರಾಜಕೀಯವಿಪಕ್ಷ ಟೀಕೆಗೆ ಸಿಎಂ ಉತ್ತರ ಬಜೆಟ್ ಖಾಲಿ ಚೊಂಬಲ್ಲ, ಭರ್ತಿ ಚೊಂಬು

ವಿಪಕ್ಷ ಟೀಕೆಗೆ ಸಿಎಂ ಉತ್ತರ ಬಜೆಟ್ ಖಾಲಿ ಚೊಂಬಲ್ಲ, ಭರ್ತಿ ಚೊಂಬು

ಬೆಂಗಳೂರು : ರಾಜ್ಯ ಮುಂಗಡಪತ್ರವು ತುಂಬಿದ ಕೊಡವೇ ಹೊರತು ಖಾಲಿ ಚೊಂಬು ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಸಮರ್ಥಿಸಿಕೊಂಡರು.

2026-27ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಉತ್ತರ ನೀಡಿದ ಅವರು, ವಿರೋಧ ಪಕ್ಷದವರು ಬಜೆಟ್‌ನ್ನು ಟೀಕಿಸುವಾಗ ಖಾಲಿ ಚೊಂಬು ಎಂದು ಹೇಳಿದ್ದಾರೆ. ಆದರೆ ನಾನು ಮಂಡಿಸಿರುವ 17ನೇ ಬಜೆಟ್‌ ಕರ್ನಾಟಕಕ್ಕೆ ಖಾಲಿ ಚೊಂಬಲ್ಲ. ಭರ್ತಿ ಚೊಂಬು ಎಂದರು.

ಆಗ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಕೇಂದ್ರದ ಬಜೆಟ್‌ ಬಗ್ಗೆ ಮಾತನಾಡುವಾಗ ನಾನು ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ಟೀಕಿಸಿದ್ದೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯವರು ರಾಜ್ಯದ ಬಜೆಟ್‌ ಬಗ್ಗೆ ಖಾಲಿ ಚೆಂಬು ಎಂದಿದ್ದಾರೆಂದು ಟೀಕಿಸಿದರು.

ವಿರೋಧ ಪಕ್ಷದವರು ಬಜೆಟ್‌ನ್ನು ಟೀಕೆ ಮಾಡಿದ ಮಾತ್ರಕ್ಕೆ ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ. ಬೇವಿನ ಹಣ್ಣು ಮಾವಿನ ಹಣ್ಣಾಗಲು ಸಾಧ್ಯವಿಲ್ಲ. ಹಾಗೆ ಟೀಕೆ ಮಾಡಿದ ಮಾತ್ರಕ್ಕೆ ಬಜೆಟ್‌ನ ಗಂಭೀರತೆಯೂ ಹಾಳಾಗುವುದಿಲ್ಲ. ನಾಡಿನ ಜನರು ಬುದ್ದಿವಂತರು. ಮಾವಿನ ಹಣ್ಣನ್ನು ಮಾವಿನ ಹಣ್ಣೆಂದೇ ಭಾವಿಸುತ್ತಾರೆ ಎಂದರು.

ವಿರೋಧ ಪಕ್ಷದ ನಾಯಕ ಅಶೋಕ್‌ ಮಾತನಾಡಿ, ಮಾವಿನ ಹಣ್ಣಿನಲ್ಲಿ ಹುಳಿ ಬಂದಿದೆ ಎಂದು ಹೇಳಿದ್ದೆ ಎಂದಾಗ, ಸಿದ್ದರಾಮಯ್ಯ ಹುಳಿ ಬಂದಿದೆ ಎಂದು ಹೇಳಿಲ್ಲ. ಸಾಲವನ್ನು ಹೇಳಿದ್ದೀರಾ. ಆ್ಯಕ್ಸಿಜೆನ್‌ ಮೇಲಿದೆ, ಕ್ರೆಡಿಟ್‌ ಕಾರ್ಡ್‌ ಬಜೆಟ್‌, ಆ್ಯಕ್ಸಿಜೆನ್‌ ಬಜೆಟ್‌ ಎಂದೆಲ್ಲಾ ಟೀಕಿಸಿದ್ದೀರಿ ಎಂದು ಆಕ್ಷೇಪಿಸಿದರು.

2026-27ನೇ ಸಾಲಿನ ಆಯವ್ಯಯದ ಮೇಲೆ ಆಡಳಿತ ಮತ್ತು ಪ್ರತಿಪಕ್ಷದವರು ಸೇರಿದಂತೆ 50 ಶಾಸಕರು ಮಾತನಾಡಿದ್ದಾರೆ. 24 ಗಂಟೆ 45 ನಿಮಿಷ ಮಾತನಾಡಿದ್ದಾರೆ. ಇದು ಒಂದು ದಿನಕ್ಕಿಂತ ಹೆಚ್ಚಾಗಿದೆ. 17 ಬಜೆಟ್‌ಗಳನ್ನು ನಾನು ಮಂಡಿಸಿದ್ದೇನೆ. ಉತ್ತರವನ್ನೂ ಕೊಟ್ಟಿದ್ದೇನೆ.

ಆದರೆ ಇಷ್ಟೊಂದು ಶಾಸಕರು ಬಜೆಟ್‌ ಮೇಲೆ ಮಾತನಾಡಿರುವುದು ಇದೇ ಮೊದಲು ಎಂದರು.
ಬಜೆಟ್‌ ಮೇಲಿನ ಚರ್ಚೆ ಸಂದರ್ಭದಲ್ಲಿ ಕೆಲವರು ಟೀಕಿಸಿದ್ದಾರೆ, ಕೆಲವರು ಸ್ವಾಗತಿಸಿದ್ದಾರೆ, ಇನ್ನು ಕೆಲವರು ವಿಮರ್ಶೆ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರು ಮಾಧ್ಯಮಗಳಿಗೆ ಆಕರ್ಷಕವಾಗಿ ಹೆಡ್‌ಲೈನ್‌ ಆಗುವಂತೆ ಅನೇಕ ಪದಪುಂಜಗಳನ್ನು ಬಳಸಿ ಟೀಕಿಸಿದ್ದಾರೆ.

182 ಪುಟಗಳ ಮುಂಗಡಪತ್ರಕ್ಕೆ ಸರಿಸಮಾನವಾಗಿ ವಿಪಕ್ಷ ನಾಯಕರು 3 ಗಂಟೆ 6 ನಿಮಿಷ ಬಜೆಟ್‌ ಮೇಲೆ ಮಾತನಾಡಿದ್ದಾರೆ ಎಂದು ತಿಳಿಸಿದರು. ವಿಪಕ್ಷ ನಾಯಕರು ಬಜೆಟ್‌ ಬಗ್ಗೆ ಆಳವಾದ ಅಧ್ಯಯನ ಮಾಡಿಲ್ಲ. ಒಂದು ವೇಳೆ ಮಾಡಿದ್ದರೆ ಬಜೆಟ್‌ನ ತಿರುಳು ಗೊತ್ತಾಗುತ್ತದೆ. ರಾಜ್ಯ ಮತ್ತು ದೇಶದ ರಾಜಕೀಯವು ಆರ್ಥಿಕತೆ ಇಲ್ಲದೇ ಇಲ್ಲ. ಬಜೆಟ್‌ ಮೇಲೆ ಮಾತನಾಡಿರುವವರು ಒಳ್ಳೆಯ ಸಂಸದೀಯಪಟು ಆಗುತ್ತಾರೆ ಎಂದರು.

ಬಜೆಟ್‌ ಮೇಲೆ ಪತ್ರಿಕೆಗಳು, ವಿವಿಧ ಕ್ಷೇತ್ರಗಳ ತಜ್ಞರು, ಉದ್ಯಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

2026-27ನೇ ಸಾಲಿನ ಮುಂಗಡಪತ್ರವು 4,48,04 ಕೋಟಿ ರೂ. ಗಾತ್ರದ ಬಜೆಟ್‌ ಆಗಿದೆ. 2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಆಗಿತ್ತು. 38,455 ಕೋಟಿ ರೂ. ಬಜೆಟ್‌ ಗಾತ್ರದಲ್ಲಿ ಹೆಚ್ಚಳವಾಗಿದೆ. ಶೇ.9.4ರಷ್ಟು ಬೆಳವಣಿಗೆಯಾಗಿದೆ. ಆರ್ಥಿಕವಾಗಿ ಮುಗ್ಗಟ್ಟು ಇದ್ದರೆ ಈ ಬೆಳವಣಿಗೆ ಆಗುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರದ ಗಾತ್ರ ಶೇ.5.6ರಷ್ಟಿದೆ. 2025-26ನೇ ಸಾಲಿನಲ್ಲಿ ಕೇಂದ್ರದ ಬಜೆಟ್‌ 50.65 ಲಕ್ಷ ಕೋಟಿ ರೂ. ಆಗಿತ್ತು. ಪ್ರಸಕ್ತ ಸಾಲಿನಲ್ಲಿ 53.47 ಲಕ್ಷ ಕೋಟಿ ರೂ.ನಷ್ಟಾಗಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು .

ಕರ್ನಾಟಕದ ಜಿಎಸ್‌‍ಡಿಪಿ 2026-27ನೇ ಸಾಲಿಗೆ 33,05,500 ಕೋಟಿ ರೂ.ಗಳಾಗಿವೆ. ಇದರ ಬೆಳವಣಿಗೆ ದರ ಶೇ.8.1ರಷ್ಟಿದೆ. ಆದರೆ ಭಾರತದ ಸರ್ಕಾರದ ಜಿಎಸ್‌‍ಡಿಪಿ ಬೆಳವಣಿಗೆ ದರ ಶೇ.7.4ರಷ್ಟಿದೆ. ಕರ್ನಾಟಕ ಸರ್ಕಾರದ ಬೆಳವಣಿಗೆ ದರ ಭಾರತ ಸರ್ಕಾರಕ್ಕಿಂತ ಹೆಚ್ಚಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ವಿತ್ತೀಯ ಕೊರತೆಯು ಶೇ.3ರೊಳಗಿರಬೇಕು. ಒಟ್ಟು ಸಾಲವು ಶೇ.25ರ ಜಿಡಿಪಿಯನ್ನು ಮೀರಬಾರದು ಎಂಬ ಆರ್ಥಿಕ ಶಿಸ್ತಿನ ಮಾನದಂಡಗಳನ್ನು ರಾಜ್ಯ ಸರ್ಕಾರ ಪಾಲಿಸಿದೆ. ವಿತ್ತೀಯ ಕೊರತೆ ಶೇ.2.95ರೊಳಗಿದ್ದು, ಸಾಲದ ಪ್ರಮಾಣ ಜಿಡಿಪಿಯ ಶೇ.24.94ರಷ್ಟಿದೆ.
ಬಜೆಟ್‌ನಲ್ಲಿ ವಾಸ್ತವವನ್ನು ತಿಳಿಸಲಾಗಿದೆಯೇ ಹೊರತು. ಯಾರನ್ನೂ ದಾರಿ ತಪ್ಪಿಸುತ್ತಿಲ್ಲ.

ಆಯವ್ಯಯವು ಆರ್ಥಿಕ ಹೊಣೆಗಾರಿಕೆಯ ಮಾನದಂಡಗಳನ್ನು ಪಾಲಿಸಿದೆ ಎಂದರು.
ಜನರಿಗೆ ಸಾಮಾಜಿಕ ನ್ಯಾಯ ನೀಡಿ ಆರ್ಥಿಕ ಶಕ್ತಿ ತುಂಬುವುದು ಮುಖ್ಯ. ಮಹಿಳೆಯರು, ರೈತರು, ಕಾರ್ಮಿಕರು, ಹಿಂದುಳಿದವರಿಗೆ, ದೀನದಲಿತರಿಗೆ ಶಕ್ತಿ ತುಂಬುವುದು ಮುಖ್ಯ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

RELATED ARTICLES
- Advertisment -
Google search engine

Most Popular