ಬೆಂಗಳೂರು : ಶಾಸಕರ ಅಧಿಕಾರ ವ್ಯಾಪ್ತಿಗೆ ಹಸ್ತಕ್ಷೇಪ ಮಾಡುವುದು ಮತ್ತು ಶಿಷ್ಟಾಚಾರ ಉಲ್ಲಂಘಿಸುವ ಅಧಿಕಾರಿಗಳ ವರ್ತನೆಗೆ ಕಡಿವಾಣ ಹಾಕಲು ಸರ್ಕಾರ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ (ಎಸ್‌ಒಪಿ) ರೂಪಿಸುವ ಅಗತ್ಯವಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ.
ಇನ್ನೂ ಈ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಸದನದಲ್ಲಿ ವಿಷಯ ಪ್ರಸ್ತಾಪಿಸಿ, ನಾನು ಅಧಿವೇಶನದಲ್ಲಿದ್ದಾಗ ನನ್ನ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಕಾಮಗಾರಿ ಪರಿಶೀಲಿಸಿದ್ದಾರೆ.
ಇದು ನನ್ನ ಗೌರವಕ್ಕೆ ಚ್ಯುತಿ ತರುವ ಪ್ರಯತ್ನವಾಗಿದೆ. ಶಿಷ್ಟಾಚಾರ ಉಲ್ಲಂಘಿಸಿದ ಆಯುಕ್ತ ಚಂದ್ರಶೇಖರ್ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರ ಸ್ಪೀಕರ್ ಸೂಚನೆ ನೀಡಬೇಕು ಎಂದರು.
ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ಶಾಸಕ ಸುನೀಲ್ ಕುಮಾರ್, ಅಧಿಕಾರಿಗಳ ಇಂತಹ ಹದ್ದುಮೀರಿದ ವರ್ತನೆ ಹಕ್ಕುಚ್ಯುತಿಯಾಗಿದೆ ಎಂದು ದೂರಿದರು.
ಸ್ಪೀಕರ್ ಪ್ರತಿಕ್ರಿಯಿಸಿ, ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಸರಿಯಲ್ಲ, ಶಾಸಕರಿಗೆ ಸೂಕ್ತ ಗೌರವ ಸಿಗುವಂತೆ ಸರ್ಕಾರ ಸ್ಪಷ್ಟ ನಿಯಮಾವಳಿ ರೂಪಿಸಬೇಕು ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.



