ಬೆಂಗಳೂರು : ತಮ್ಮ ಮಕ್ಕಳಿಗೆ ಶಾಲೆಗೆ ಸೇರಿಸಲು ಬಯಸುತ್ತಿರುವ ಫೋಷಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 1ನೇ ತರಗತಿಗೆ ಸೇರಲು ಆರು ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಘೋಷಿಸಿದ್ದು, 60 ದಿನಗಳ ಸಡಿಲಿಕೆ ನೀಡಲಾಗಿದೆ ಎಂದು ಸದನದ ಗಮನಕ್ಕೆ ತಂದಿದ್ದಾರೆ.
ಇನ್ನೂ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿ ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ ಮೂರು ಸೆಕ್ಷನ್ 20ರ ಪ್ರಕಾರ ನೀಡಲಾಗಿರುತ್ತದೆ. ಅದರಂತೆ 2026-27ನೇ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿಗೆ ಸಂಬಂಧಿಸಿ 60 ದಿನಗಳ ಸಡಿಲಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಒಂದನೇ ತರಗತಿ ದಾಖಲಾತಿಗೆ ನಿಗದಿಪಡಿಸಿದ್ದ ವಯೋಮಿತಿ ನಿಯಮವನ್ನು ಶಿಕ್ಷಣ ಇಲಾಖೆಯು ಸಡಿಲಿಕೆ ಮಾಡಿದ್ದು, ಸರ್ಕಾರದ ಈ ನಿರ್ಧಾರದಿಂದಾಗಿ ವಯಸ್ಸಿನ ಕಾರಣಕ್ಕೆ ಪ್ರವೇಶ ಸಿಗದೆ ಆತಂಕದಲ್ಲಿದ್ದ ಸಾವಿರಾರು ಮಕ್ಕಳಿಗೆ ಮತ್ತು ಪೋಷಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
ಈ ಮೊದಲು ಜಾರಿಯಲ್ಲಿದ್ದ ನಿಯಮದಂತೆ, ಒಂದನೇ ತರಗತಿಗೆ ಸೇರುವ ಮಗುವಿಗೆ ಜೂನ್ 1ರ ಅನ್ವಯ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕಿತ್ತು. ಕೇವಲ ಕೆಲವು ದಿನಗಳ ವ್ಯತ್ಯಾಸವಿದ್ದರೂ ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು.
ಪೋಷಕರ ಮನವಿಗೆ ಸ್ಪಂದನೆ : ವಯೋಮಿತಿಯ ಈ ಕಟ್ಟುನಿಟ್ಟಿನ ನಿಯಮದಿಂದಾಗಿ ಅನೇಕ ಮಕ್ಕಳು ಒಂದು ವರ್ಷ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದರಿಂದ ಶೈಕ್ಷಣಿಕ ವರ್ಷ ವ್ಯರ್ಥವಾಗುತ್ತದೆ ಎಂಬ ಪೋಷಕರ ಮತ್ತು ಶಿಕ್ಷಣ ತಜ್ಞರ ಸತತ ಮನವಿಯನ್ನು ಪುರಸ್ಕರಿಸಿದ ಸಚಿವರು ಈ ಸಡಿಲಿಕೆಯನ್ನು ಘೋಷಿಸಿದ್ದಾರೆ.
ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಕನಿಷ್ಠ 6 ವರ್ಷ ತುಂಬಿರಬೇಕು ಎಂಬುವುದು ಮೂಲ ನಿಯಮವಿತ್ತು. ಆದರೆ, ಜೂನ್ 1ಕ್ಕೆ 6 ವರ್ಷ ತುಂಬಲು ಕೇವಲ 1 ಅಥವಾ 2 ತಿಂಗಳು ಬಾಕಿ ಇರುವ ಮಕ್ಕಳಿಗೂ ಇನ್ಮುಂದೆ ಪ್ರವೇಶ ಪಡೆಯಲು ಅವಕಾಶವಿದೆ. ಈ ಸಡಿಲಿಕೆಯು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಖಾಸಗಿ ಶಾಲೆಗಳೂ ಸಹ ಈ ನಿಯಮವನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದ, ಈ ಬದಲಾವಣೆಯು ವಿಶೇಷವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಧ್ಯಮ ವರ್ಗದ ಪೋಷಕರಿಗೆ ಸಹಕಾರಿಯಾಗಿದೆ ಹಾಗೂ ಮಕ್ಕಳ ದಾಖಲಾತಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ಗೊಂದಲಗಳಿಗೆ ಕೊನೆಗೂ ತೆರೆ ಎಳೆಯಲಾಗಿದೆ.



