ಮೈಸೂರು : ನಗರದ ಯುವರಾಜ ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಲಿಖಿತವಾಗಿ ಕೋರಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಸ್ವಾಯತ್ತತೆಯನ್ನು ಹಿಂಪಡೆಯಲಾಗಿದೆಯೇ ಹೊರತು, ನಾವಾಗಿ ಸ್ವಾಯತ್ತತೆ ಹಿಂಪಡೆದಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಣ ಮಂಡಳಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, 2017ರಲ್ಲಿ 1.06 ಕೋಟಿ ರೂ. ಅನುದಾನ ಯುಜಿಸಿಯಿಂದ ಕಾಲೇಜಿಗೆ ಬಿಡುಗಡೆಯಾಯಿತು. ಆದರೆ, ಈ ಅನುದಾನಕ್ಕೆ ಸಂಬಂಧಿಸಿದಂತೆ ಕಾಲೇಜು ಇದುವರೆಗೆ ಯುಜಿಸಿಗೆ ಬಳಕೆ ಪ್ರಮಾಣಪತ್ರ ನೀಡಿಲ್ಲ. ಬಳಕೆ ಪ್ರಮಾಣಪತ್ರ ನೀಡದೆ ಹೋದರೆ ಯುಜಿಸಿ ಕಾಲೇಜನ್ನು ಮಾನ್ಯ ಮಾಡುವುದಿಲ್ಲ.
ಲೆಕ್ಕಪತ್ರ ಕೇಳಿದರೆ ಕಾಲೇಜು ಆಡಳಿತ ಮಂಡಳಿ ಜೆರಾಕ್ಸ್ ಓಚರ್‌ಗಳನ್ನು ಮಾತ್ರ ನೀಡುತ್ತಿದೆ. 2020ರಿಂದ ಲೆಕ್ಕಪತ್ರವನ್ನೇ ಮಂಡಿಸಿಲ್ಲ. ಕಾಲೇಜಿನವರು ಮನ್ಸಸು ಮಾಡಿ ಲೆಕ್ಕಪತ್ರದ ಗೊಂದಲ ಪರಿಹರಿಸಿದರೆ ಸ್ವಾಯತ್ತತೆ ನೀಡಬಹುದು. ಆದರೆ, ಈ ವಸ್ತುಸ್ಥಿತಿ ಕುರಿತು ಯಾರೂ ಸಹ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶ : 2024 ರಿಂದ 2019ರ ಅವಧಿಯಲ್ಲಿ ಪದವಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಕಡೆಯದಾಗಿ ಪರೀಕ್ಷೆ ಬರೆಯಲ ಒಂದು ಅವಕಾಶ ನೀಡಲು ಮೈಸೂರು ವಿವಿಯ ಶಿಕ್ಷಣ ಮಂಡಳಿ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ವಿದ್ಯಾರ್ಥಿಗಳು ತಾವು ಓದಿದ ಸಿಲಬಸ್‌ನಲ್ಲಿಯೇ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಅಂಕಪಟ್ಟಿಯನ್ನು ನೀಡಲು ತೀರ್ಮಾನಿಸಲಾಯಿತು.
ಅಂಕಪಟ್ಟಿ ಮುದ್ರಣಕ್ಕೆ ಅವಕಾಶ ಇಲ್ಲ: ಪ್ರಸ್ತುತ ಡಿಜಿ ಲಾಕರ್‌ನಲ್ಲಿಯೇ ಅಂಕಪಟ್ಟಿ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅಂಕಪಟ್ಟಿ ಮುದ್ರಿಸಬಾರದು ಎಂದು ಸರ್ಕಾರದ ಆದೇಶವಿದ್ದು, ಹೀಗಾಗಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ಅವಕಾಶವಿಲ್ಲ. ಒಂದುವೇಳೆ ಸರ್ಕಾರ ಅನುಮತಿ ನೀಡಿದರೆ ಅಂಕಪಟ್ಟಿ ಮುದ್ರಿಸಲು ವಿವಿ ಸಿದ್ಧವಿದೆ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.



