ಬೆಂಗಳೂರು : ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಹಿಂದೆಯೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನ ಮಾತ್ರ ಒಳಗೊಂಡ ‘ದ್ವಿಭಾಷಾ ನೀತಿ’ಯನ್ನು ಜಾರಿಗೆ ತರಲು ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ (SEP) ಆಯೋಗ ಶಿಫಾರಸು ಮಾಡಿತ್ತು. ಈ ನೀತಿಯು ಮಾತೃಭಾಷೆ/ಕನ್ನಡಕ್ಕೆ ಆದ್ಯತೆ ನೀಡುತ್ತಿದ್ದು, ಹಿಂದಿ ಭಾಷೆಯ ಕಡ್ಡಾಯ ಕಲಿಕೆಯನ್ನು ಕೈಬಿಡುವ ಗುರಿ ಹೊಂದಿತ್ತು.
ಕನ್ನಡ ಪರ ಸಂಘಟನೆಗಳ ಮನವಿ ಏನು?
ಕರವೇ ಶಿವರಾಮೇಗೌಡ, ಸಾರಾ ಗೋವಿಂದ್ ನೇತೃತ್ವದಲ್ಲಿ ಇಂದು ಬೆಂಗಳೂರು ಸದಾಶಿವನಗರದಲ್ಲಿರುವ ಸಚಿವ ಮಧು ಬಂಗಾರಪ್ಪ ಅವರನ್ನ ಭೇಟಿಯಾದ ಕನ್ನಡ ಪರ ಸಂಘಟನೆಗಳು ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಮನವಿ ಮಾಡಿವೆ. ಶಿಕ್ಷಣದಲ್ಲಿ ತ್ರಿಭಾಷ ಸೂತ್ರ ರದ್ದು ಮಾಡಿ, ದ್ವಿಭಾಷಾ ಸೂತ್ರ ಜಾರಿ ಮಾಡುವಂತೆ ಮನವಿ ಮಾಡಿವೆ.
ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?
ಕನ್ನಡ ಪರ ಸಂಘಟನೆಗಳ ಮನವಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಂದಿ ಅವಶ್ಯಕತೆ ಇಲ್ಲ ಅಂತ ಕನ್ನಡಪರ ಸಂಘಟನೆಗಳು ಹೇಳ್ತಿವೆ. ಸಿಎಂ ಕೂಡ ದ್ವಿಭಾಷಾ ಸೂತ್ರ ತಂದರೆ ಒಳ್ಳೆಯದು ಅಂತ ಹೇಳಿದ್ದಾರೆ. ದ್ವಿಭಾಷಾ ಸೂತ್ರ ಬಂದರೆ ಒಳ್ಳೆಯದು. ಈಗ ತ್ರಿಭಾಷಾ ಸೂತ್ರ ಇದೆ. ಇದು ಬದಲಾವಣೆ ಆಗಬೇಕಾದ್ರೆ ಚರ್ಚೆ ಆಗಬೇಕು. ಶಿಕ್ಷಕರ ಜೊತೆಯೂ ಮಾತಾಡ್ತೀವಿ, ಸಿಎಂ ಜೊತೆ ನಾವು ಮಾತಾಡಬೇಕು. ಎಲ್ಲಾ ಆಯಾಮಗಳಲ್ಲಿ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಹಾಗಾಗಿ ಯಾರೂ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕೋದು ಬೇಡ. ಸಿಎಂ ಜೊತೆ ಮಾತಾಡಿ ಇಂದೇ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಹೇಳಿದ್ದಾರೆ.
ಸರ್ಕಾರದ ಮುಂದಿರೋ ಆಯ್ಕೆಗಳೇನು!?
>. ಹಿಂದಿ ಭಾಷೆ ಆಯ್ಕೆ ಕಡ್ಡಾಯ ಅಲ್ಲ ಅನ್ನುವ ನಿಯಮ ಜಾರಿ ಮಾಡುವುದು. ವಿದ್ಯಾರ್ಥಿಗಳು ಇಚ್ಚೆ ಪಟ್ಟರೆ ತೆಗೆದುಕೊಳ್ಳುವ ನಿಯಮ ಜಾರಿ.
>. ರಾಜ್ಯದಲ್ಲಿರೋ ತ್ರಿಭಾಷಾ ಸೂತ್ರ ರದ್ದು ಮಾಡಿ ದ್ವಿಭಾಷಾ ಸೂತ್ರ ಜಾರಿಗೆ ಕಾನೂನು ತರುವುದು.
>. ದ್ವಿಭಾಷಾ ಸೂತ್ರದಲ್ಲಿ ರಾಜ್ಯ ಭಾಷೆ ಮತ್ತು ಪೋಷಕರು, ವಿದ್ಯಾರ್ಥಿಗಳ ಆಯ್ಕೆ ಭಾಷೆಯಾಗಿ ಇಂಗ್ಲಿಷ್, ಹಿಂದಿ ವಿಷಯ ಸೇರಿ ಬೇರೆ ವಿಷಯ ಆಯ್ಕೆಗೆ ನೀಡುವುದು.
>. ಎಸ್‌ಎಸ್‌ಎಲ್‌ಸಿ ಯಲ್ಲಿರೋ 625 ಅಂಕದಲ್ಲಿ ಹಿಂದಿ ವಿಷಯದ 100 ಅಂಕ ಕಡಿತ ಮಾಡಿ 500 ಅಂಕಗಳಿಗೆ ಪರೀಕ್ಷೆ ನಡೆಸೋದು.
>. ಹಿಂದಿ ವಿಷಯವನ್ನ ಕಲಿಕಾ ವಿಷಯವಾಗಿ ಮುಂದುವರಿಸಿ ಪರೀಕ್ಷೆ ಕಡ್ಡಾಯ ಮಾಡೋ ನಿಯಮ ರದ್ದು ಮಾಡಿ ಆಯ್ಕೆಯನ್ನ ವಿದ್ಯಾರ್ಥಿಗಳಿಗೆ ಬಿಡುವುದು.
>. ಹಿಂದಿ ವಿಷಯದ ಅಂಕಗಳನ್ನ ಒಟ್ಟು ಅಂಕಗಳಿಗೆ ಪರಿಗಣಿಸದೇ ಇರುವುದು.
ಬೇರೆ ರಾಜ್ಯದಲ್ಲಿ ʻಹಿಂದಿʼ ವಿಷಯದ ಬಗೆಗಿನ ನಿಲುವೇನು?
ತಮಿಳುನಾಡು
> ಹಿಂದಿ ಹೇರಿಕೆಯ ವಿರುದ್ಧದ ಹೋರಾಟ ಮಾಡಿದೆ.
> ತಮಿಳುನಾಡಿನಲ್ಲಿ ದ್ವಿಭಾಷಾ ನೀತಿ ಜಾರಿ ಮಾಡಿದ್ದು, ತಮಿಳು ಮತ್ತು ಇಂಗ್ಲಿಷ್‌ಗೆ ಒತ್ತು ನೀಡಲಾಗಿದೆ.
> ಕೇರಳ-ಆಂಧ್ರ ಪ್ರದೇಶ-ತೆಲಂಗಾಣ ರಾಜ್ಯಗಳೂ ಸಹ ʻಹಿಂದಿʼ ಕಡ್ಡಾಯ ನೀತಿಯನ್ನು ವಿರೋಧಿಸಿವೆ
> ಶಿಕ್ಷಣ ಮತ್ತು ಆಡಳಿತದಲ್ಲಿ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ.



