ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿರುವ ಸಂದೇಶ್ ಎಂಬವರ ಮಾಲಿಕತ್ವದ ‘ಗುರುರಾಜ್’ ಎಂಬ ಆಳಸಮುದ್ರ ಮೀನುಗಾರಿಕಾ ಬೋಟ್ನಲ್ಲಿ ಗೋಬಿಂದ ದಾಸ್(42) ಎಂಬವರು ಮಾರ್ಚ್ 6 ರಂದು ರಾತ್ರಿ ಒಟ್ಟು 9 ಜನ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿರುತ್ತಾರೆ. ಮೀನುಹಿಡಿಯುವ ಸಲುವಾಗಿ ಬಲೆ ಬೀಸಲು ತೊಡಗಿದಾಗ ಗೋಬಿಂದ ದಾಸ್ ಬೋಟ್ನಲ್ಲಿ ಇರದೇ ಕಾಣೆಯಾಗಿದ್ದಾರೆ. ಅಥವಾ ರಾತ್ರಿ ಸಮಯ ಗೋಬಿಂದ ದಾಸ್ ಆಕಸ್ಮಿಕವಾಗಿ ಬೋಟ್ನಿಂದ ಜಾರಿ ಆಳ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ಕೂದಲು, ಹಿಂದಿ, ಬೆಂಗಾಳಿ ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀಶರ್ಟ್,ಮತ್ತು ಕಪ್ಪು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದರು. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



