ಚಾಮರಾಜನಗರ : ಚಾಮರಾಜನಗರದ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 25ಕ್ಕೂ ಹೆಚ್ಚು ಎಕರೆ ಅಗ್ನಿಗಾಹುತಿಯಾಗಿದೆ. ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂದು ವಾರದಲ್ಲಿ ಎರಡು ಕಡೆ ಕಾಡ್ಗಿಚ್ಚು ಉಂಟಾಗಿ, ಕಾಡು ಹೊತ್ತಿ ಉರಿದಿದ್ದು ಅರಣ್ಯಾಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅಲ್ಲದೆ ಜತೆಗೆ ಕಾಡು ಪ್ರಾಣಿಗಳ ನಿರಂತರವಾಗಿ ನಾಡಿಗೆ ಲಗ್ಗೆಯಿಟ್ಟು ತೊಂದರೆ ಕೊಡುತ್ತಿವೆ.
ಪದೇ ಪದೇ ಕಾಡು ಪ್ರಾಣಿಗಳು ನಾಡಿಗೆ ಎಂಟ್ರಿ ಕೊಡುತ್ತಿದ್ದು, ನಾವು ಎಷ್ಟೇ ಬಾರಿ ಮನವಿ ಮಾಡಿದರೂ ಕೂಡ ಅಧಿಕಾರಿಗಳು ಸ್ಪಂದಿಸ್ತಿಲ್ಲ, ಇದರಿಂದ ರೊಚ್ಚಿಗೆದ್ದಿರುವ ಸ್ಥಳೀಯರು ಕಾಡಿಗೆ ಬೆಂಕಿಯಿಡುತ್ತಿದ್ದಾರೆಂಬ ಚರ್ಚೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಭಾಗದಲ್ಲಿ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯಕ್ಕೆ ಬೆಂಕಿಯಿಟ್ಟಿದ್ದಾರೆ. ಇದರಿಂದ 35ಕ್ಕೂ ಹೆಚ್ಚು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಕಳೆದ ತಿಂಗಳ 26ರಂದು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯದ ಬೈಲೂರು ವಲಯ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರು.
ಇದೀಗಾ ಮತ್ತೇ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟರು. ಆದರೆ ಪದೇ ಪದೇ ಬೆಂಕಿ ಕಾಣಿಸಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆಗೆ ಎಷ್ಟೇ ಬಾರಿ ಕರೆ ಮಾಡಿದರೂ ಕೂಡ ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ.
ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೈಲೂರು ವಲಯ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದ ಹತ್ತಕ್ಕೂ ಹೆಚ್ಚು ಕಡೆ ಬೆಂಕಿ ಹೊತ್ತಿಕೊಂಡಿದೆ. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.



