ಗುಂಡ್ಲುಪೇಟೆ: ಮಿಷನ್ ಇಂದ್ರ ಧನುಷ್ 5.0 ಲಸಿಕೆಯನ್ನು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಿರ್ಲಕ್ಷ್ಯ ತೋರದೆ ಸದುಪಯೋಗಪಡಿಸಿಕೊಳ್ಳಿ ಎಂದು ಪುರಸಭೆ ಸದಸ್ಯ ಹೆಚ್.ಆರ್.ರಾಜಗೋಪಾಲ್ ಸಲಹೆ ನೀಡಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಇಂದ್ರ ಧನುಷ್ 5.0 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾದಿಂದ ಎರಡು ವರ್ಷಗಳ ಕಾಲ ಇಂತಹ ಕಾರ್ಯಕ್ರಮಗಳು ಸ್ಥಗಿತಗೊಂಡಿತು. ಇದೀಗ ಸಹಜ ಸ್ಥಿತಿಗೆ ಬಂದಿದ್ದು, ಆರೋಗ್ಯ ಇಲಾಳೆ ವತಿಯಿಂದ ನೀಡುವ ಪ್ರತಿಯೊಂದು ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಇಂದ್ರ ಧನುಷ್ ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳನ್ನು ಈ ಏಳು ಬಣ್ಣಗಳು ಪ್ರತಿನಿಧಿಸುತ್ತವೆ. ಭಾರತದಲ್ಲಿ 2009 ಮತ್ತು 2013ರ ನಡುವೆ, ವ್ಯಾಕ್ಸಿನೇಷನ್ ಪ್ರಮಾಣ ಶೇ. 61 ರಿಂದ ಶೇ.65ಕ್ಕೆ ಏರಿಕೆಯಾಗಿದೆ. ಕಳೆದ ಏಳು ವರ್ಷಗಳಲ್ಲಿ ಪ್ರತಿ ವರ್ಷ ಶೇ.1ರಷ್ಟು ಮಾತ್ರವೇ ಏರಿಕೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಳಕ್ಕೆ ಹೋಲಿಸಿದರೆ, ವ್ಯಾಕ್ಸಿನೇಷನ್ ಹೆಚ್ಚಳದ ಪ್ರಮಾಣ ತುಂಬಾ ಕಡಿಮೆ ಇದೆ. ಹೀಗಾಗಿ ಮಾರಕ ರೋಗಗಳು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಯನ್ನು ವ್ಯಾಕ್ಸಿನೇಷನ್ ಮೂಲಕ ಮಾತ್ರವೇ ತಡೆ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಅಭಿವೃದ್ಧಿಯನ್ನು ವೇಗಗೊಳಿಸಲು ಈ ಯೋಜನೆಯನ್ನು ಪರಿಚಯಿಸಿದೆ. ಆದ್ದರಿಂದ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಮಹದೇವಮೂರ್ತಿ, ಡಾ.ಲಲಿತ, ಡಾ.ಸೌದ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
