ಮೈಸೂರು: ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿಯಾಗಿದೆ. ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ, ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಹೇಳಿದರು.
ದೇವರಾಜ ಮೊಹಲ್ಲಾದಲ್ಲಿರುವ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ವೈದ್ಯ ವೃಂದ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಡವರ, ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರಗಳು ಉಪಯುಕ್ತ. ಕೋವಿಡ್ ನಂತರ ಆರೋಗ್ಯ ಸೇವೆಯಲ್ಲಿ ಅನೇಕ ಬದಲಾವಣೆ ಕಂಡಿದ್ದೇವೆ. ಇಂತಹ ಉಚಿತ ಆರೋಗ್ಯ ಶಿಬಿರವನ್ನು ಪ್ರತಿ ತಿಂಗಳು ಮಾಡುವ ಸದುದ್ದೇಶವಿದೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರ ಸಹಕಾರಿಯಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ೨೦೦ಕ್ಕೂ ಹೆಚ್ಚು ಮಂದಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಥೈರಾಯ್ಡ್ ಪರೀಕ್ಷೆ, ಹೆಚ್‌ಬಿಎ೧ಸಿ (ಸಕ್ಕರೆ ಕಾಯಿಲೆ ಪರೀಕ್ಷೆ), ಅಲ್ಟ್ರಾಸೋನೋಗ್ರಫಿ, ಇಸಿಜಿ ಹೃದಯದ ಪರೀಕ್ಷೆ, ಚಿಕ್ಕ ಮಕ್ಕಳ, ಡಯಾಬಿಟಿಸ್ ಮತ್ತು ಹೃದಯರೋಗ, ಪರೀಕ್ಷೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಂ.ಆರ್.ಸುದರ್ಶನ್, ಡಾ.ಶ್ವೇತಶ್ರೀ, ನರ್ಸ್‌ಗಳಾದ ಕಲಾ, ರಮ್ಯಾ ಟೆಕ್ನೀಷಿಯನ್ ಶಿರಿನ್, ಚಾಲಕರಾದ ಪ್ರಜ್ವಲ್ ಮತ್ತು ೨೩ನೇ ವಾರ್ಡಿನ ನಗರ ಪಾಲಿಕೆಯ ಹೆಲ್ತ್ ಸೂಪರ್‌ವೈಸರ್ ನಂಜುಂಡಸ್ವಾಮಿ, ಪೌರಕಾರ್ಮಿಕರು ಮತ್ತು ವಾರ್ಡಿನ ಬಿಜೆಪಿ ಮುಖಂಡರುಗಳಾದ ಭರತ್, ಆರ್.ಪರಮೇಶ, ಸುರೇಂದ್ರ, ಶ್ರೀನಿವಾಸ್, ಸಚಿನ್, ವಿಜ್ಞೇಶ್ವರ ಭಟ್, ಗೋಪಿ, ರಾಜಣ್ಣ, ಪ್ರವೀಣ್, ಚರಣ್, ಲಕ್ಷ್ಮಿ, ಪಾಪಣ್ಣ, ಗಣೇಶ್, ವಿಜಯಾನಂದ, ವಿನೋದ್, ಪ್ರಮೋದ್, ಸುಕನ್ಯಾ, ಚಂದ್ರಕಲಾ, ಜ್ಯೋತಿ, ರವಿ ಮುಂತಾದವರು ಉಪಸ್ಥಿತರಿದ್ದರು.