Tuesday, April 7, 2026
Google search engine

Homeಆರೋಗ್ಯಟಿಬಿ ವಿರುದ್ಧ ಹೋರಾಟ : ತ್ವರಿತ ಪರೀಕ್ಷೆಗೆ ಕರೆ : ಮೈಸೂರು ಕ್ಷಯಮುಕ್ತ ಗುರಿ

ಟಿಬಿ ವಿರುದ್ಧ ಹೋರಾಟ : ತ್ವರಿತ ಪರೀಕ್ಷೆಗೆ ಕರೆ : ಮೈಸೂರು ಕ್ಷಯಮುಕ್ತ ಗುರಿ

ಮೈಸೂರು : ಮೈಸೂರನ್ನು ‘ಕ್ಷಯ’ರೋಗ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಬೇಕೆಂಬ ಉದ್ದೇಶದಿಂದ ಆರೋಗ್ಯ ಇಲಾಖೆ ನಗರ ಪ್ರದೇಶದಲ್ಲಿ ವಾರ್ಡ್‌ವಾರು ಸಮೀಕ್ಷೆಗೆ ವಿಶೇಷ ಕ್ರಿಯಾಯೋಜನೆ ರೂಪಿಸಿದೆ. ಅಲ್ಲದೆ, ಜಿಲ್ಲೆಯ 147 ಗ್ರಾಪಂಗಳನ್ನು ‘ಕ್ಷಯ ಮುಕ್ತ ಗ್ರಾಪಂ’ ಎಂದು ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಹಾಗೂ ನಾನಾ ಯೋಜನೆಗಳ ಅನುಷ್ಠಾನದಿಂದಾಗಿ ವರ್ಷದಿಂದ ವರ್ಷಕ್ಕೆ ಕ್ಷಯ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕಾಗಿ ವೈದ್ಯರು, ದಾದಿಯರು ಹಾಗೂ ಆಶಾ ಕಾರ‍್ಯಕರ್ತೆಯರು ಮನೆಮನೆಗೆ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಉಚಿತ ತಪಾಸಣೆ ಹಾಗೂ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಬಹುಬೇಗನೆ ಪತ್ತೆ ಹಚ್ಚಲಾಗುತ್ತಿದೆ.

‘ ನಿಕ್ಷಯ್‌ ಪೋಷಣ್‌ ’, ‘ನಿಕ್ಷಯ್‌’ ಯೋಜನೆ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಗ್ರಾಪಂಗಳಲ್ಲಿ ಸಕ್ರಿಯ ಕ್ಷಯ ಪ್ರಕರಣ ಕಂಡು ಹಿಡಿಯುವುದು, ಆರಂಭಿಕ ರೋಗ ನಿರ್ಣಯ ಪತ್ತೆ ಮಾಡಿ ತ್ವರಿತ ಚಿಕಿತ್ಸೆ ಪ್ರಾರಂಭಿಸುವುದು, ಪೌಷ್ಟಿಕ ಆಹಾರದ ಆರೈಕೆ ಕಲ್ಪಿಸುವುದು, ಕ್ಷಯ ರೋಗದ ತೀವ್ರತೆಯನ್ನು ಕಡಿಮೆಗೊಳಿಸುವ ಕೆಲಸವನ್ನು ಆರೋಗ್ಯ ಇಲಾಖೆ ನಿರ್ವಹಿಸುತ್ತಿದೆ.

‘‘ಮೈಸೂರು ಜಿಲ್ಲೆಯಲ್ಲಿ 256 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ 147 ಗ್ರಾಪಂಗಳನ್ನು ಕ್ಷಯ ಮುಕ್ತವೆಂದು ಘೋಷಿಸಲಾಗಿದೆ. ಇದಕ್ಕಾಗಿ ಆರು ಅಂಶಗಳನ್ನು ಪರಿಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದಿರುವ ಪಂಚಾಯಿತಿಗಳನ್ನು ಕ್ಷಯ ಮುಕ್ತಗೊಳಿಸಲು ಕ್ರಿಯಾ ಯೋಜನೆ ರೂಪಿಸಿದೆ. ಅಲ್ಲದೆ, ಕ್ಷಯ ಮುಕ್ತ ಗ್ರಾಪಂನಲ್ಲಿ ಮತ್ತೆ ರೋಗ ಬಾರದಂತೆ ನಿಗಾ ವಹಿಸಲಾಗಿದೆ. ತಾಲೂಕು ಮಟ್ಟದಲ್ಲೂ ತಂಡ ರಚನೆ ಮಾಡಲಾಗಿದೆ,’’ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಮೊಹಮದ್‌ ಸಿರಾಜ್‌ ಅಹಮದ್‌ ತಿಳಿಸಿದ್ದಾರೆ.

ಕ್ಷಯ ಪ್ರಮಾಣ ಇಳಿಕೆ – ಕ್ಷಯರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಸಕಾಲಿಕ ಮತ್ತು ಮುಂದುವರಿದ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳಿಂದಾಗಿ, ಜಿಲ್ಲೆಯಲ್ಲಿ ಕ್ಷಯರೋಗ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ. 2021ರಲ್ಲಿ 3597 ಪ್ರಕರಣ, 2022ರಲ್ಲಿ 4008 ರೋಗಿಗಳು, 2023ರಲ್ಲಿ 3713 ಪ್ರಕರಣ, 2024ರಲ್ಲಿ 3500, 2025ರಲ್ಲಿ ಕ್ಷಯರೋಗ ಪ್ರಕರಣಗಳ ಸಂಖ್ಯೆ 3386 ಇಳಿಕೆಯಾಗಿವೆ.

ಮೈಸೂರಿನಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸುತ್ತಿದೆ. ಸರಕಾರ ಆಸ್ಪತ್ರೆಗಳಲ್ಲಿ ಉಚಿತ ಕಫ ಪರೀಕ್ಷೆ ಸೇವೆ ಲಭ್ಯವಿದೆ. ಪ್ರತಿಯೊಬ್ಬರೂ ವರ್ಷಕ್ಕೊಂದು ಬಾರಿ ಟಿಬಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಬಾಯಿಗೆ ಅಡ್ಡಲಾಗಿ ಕರವಸ್ತ್ರ ಇಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಉಗುಳಬಾರದು. ಸೋಂಕು ಗಾಳಿಯಲ್ಲಿ ಹರಡಿ ಬೇರೆಯವರಿಗೂ ತಗುಲುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮ ಅಗತ್ಯ.

ಸಾಮಾನ್ಯವಾಗಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಕಫದೊಂದಿಗೆ ಕೆಮ್ಮು, ಕೆಲವೊಮ್ಮೆ ರಕ್ತದೊಂದಿಗೆ ಕಫ ಬೀಳುತ್ತದೆ. ಎದೆ ನೋವು, ಸಂಜೆ ಜ್ವರ, ರಾತ್ರಿಯಲ್ಲಿ ಬೆವರುವುದು, ತೂಕ ನಷ್ಟ ಹಸಿವಿನ ಕೊರತೆ ಕಾಣಿಸಿಕೊಳ್ಳುತ್ತದೆ. ಇಂತಹವರು ಟಿಬಿ ಉಚಿತ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ, ಪಿಕೆಟಿಬಿ ಮತ್ತು ಸಿಡಿ (ರಾಜಕುಮಾರಿ ಕೃಷ್ಣಾಜಮ್ಮಣ್ಣಿ ಕ್ಷಯ ಮತ್ತು ಎದೆ ರೋಗಗಳ ಆಸತ್ರೆ) ಆಸ್ಪತ್ರೆ ಸಂಪರ್ಕಿಸಬಹುದು.

ಕ್ಷಯ ರೋಗ ಮೈಕ್ರೋಬ್ಯಾಕ್ಟಿರಿಯಂ ಟುಬರ್ಕಿಲೋಸಸ್‌ ರೋಗಾಣುವಿನಿಂದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ರೋಗಾಣುವಿರುವವರಿಗೆ ಚಿಕಿತ್ಸೆ ನೀಡದಿದ್ದರೆ ವರ್ಷದಲ್ಲಿ 10ರಿಂದ 15 ಮಂದಿಗೆ ಸೋಂಕು ಉಂಟು ಮಾಡುತ್ತಾರೆ. ಪ್ರತಿ 1 ಲಕ್ಷ ಜನಸಂಖ್ಯೆಗೆ 187 ಮಂದಿ ಸೋಂಕಿತರಿರುತ್ತಾರೆ.

RELATED ARTICLES
- Advertisment -
Google search engine

Most Popular