ಬೆಂಗಳೂರು : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ (ಎ.9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ.
ಗುರುವಾರ ಮಧ್ಯಾಹ್ನ 3.00 ಗಂಟೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದ್ದು, ಸದರಿ ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಹಾಗೂ KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಲಿಯಿಂದ ರವಾನಿಸಲಾಗುವುದು.
ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ (DigiLocker) ಮೂಲಕ ನಾಳೆ ಮಧ್ಯಾಹ್ನ 3.00 ಗಂಟೆಗೆ ಲಭ್ಯಗೊಳಿಸಲಾಗುವುದು. https://www.digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಮಂಡಳಿಯ ಪ್ರಕಟನೆ ತಿಳಿಸಿದೆ.



