ಮಂಡ್ಯ: ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ನಿವೇಶನಗಳ ಹಂಚಿಕೆ ಮಾಡಿದ್ದಾರೆಂದು ಆರೋಪಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಶನಿ ಮಠದ ಧರ್ಮಾಧಿಕಾರಿ ರಾಜು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್ ಎಸ್ ಬಳಿಯ ಹೊಸಹುಂಡುವಾಡಿ ಗ್ರಾಮದಲ್ಲಿ ರಾಜು ಶನಿ ದೇಗುಲ ನಿರ್ಮಿಸಿದ್ದಾರೆ.
ಅಕ್ರಮ ನಿವೇಶನಗಳ ದಂಧೆಯಿಂದ ಶನಿ ದೇಗುಲ ಹಾಗೂ ವೃದ್ಧಾಶ್ರಮಕ್ಕೆ ಅಡ್ಡಿಯಾಗುತ್ತಿದ್ದು, ದಂಧೆಯ ಕುರಿತು ಸರ್ಕಾರ ಹಾಗೂ ಡಿಸಿಗೆ ದೂರು ನೀಡಲಾಗಿದೆ. ದೂರು ಆಧರಿಸಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪಂಚಾಯ್ತಿ ಹಾಗೂ ತಾಲೂಕು ಆಡಳಿತಕ್ಕೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಯ ಆದೇಶಕ್ಕೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಅಕ್ರಮ ನಿವೇಶ ದಂಧೆಯ ತನಿಖೆಗೆ ಆಗ್ರಹಿಸಿ ಶನಿ ಭಕ್ತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸರ್ಕಾರದ ದರ್ಖಾಸು ಜಾಗವನ್ನು ನಿವೇಶನ ಮಾಡಿ ಅಕ್ರಮ ಮಾರಾಟ ಮಾಡಿರುವ ಸೂರ್ಯನಾರಾಯಣ ಎಂಬ ವ್ಯಕ್ತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸೂರ್ಯನಾರಾಯಣ ಅಕ್ರಮ ನಿವೇಶನ ಮಾರಾಟದ ಮಾಡುತ್ತಿದ್ದಾರೆಂದು ಆರೋಪಿಸಿದ್ದು, ತಕ್ಷಣವೇ ಅಧಿಕಾರಿಗಳು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.