ವಾಷಿಂಗ್ಟನ್/ಇಸ್ಲಾಮಾಬಾದ್ : ಮಧ್ಯಪ್ರಾಚ್ಯದಲ್ಲಿ ಎದ್ದಿದ್ದ ಯುದ್ಧದ ಕಾರ್ಮೋಡ ಸದ್ಯಕ್ಕೆ ಕೊಂಚ ತಿಳಿಯಾಗಿದೆ. ಇರಾನ್ ವಿರುದ್ಧದ ಯುದ್ಧವಿರಾಮವನ್ನು ಮುಂದುವರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ವಿಶೇಷ ಮನವಿಯ ಮೇರೆಗೆ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.
ಟ್ರಂಪ್ ಸೋಶಿಯಲ್ ಮೀಡಿಯಾ ಪೋಸ್ಟ್ ನ ಮುಖ್ಯಾಂಶಗಳು ಹೀಗಿದೆ :
ಅಮೆರಿಕ ಅಧ್ಯಕ್ಷರು ತಮ್ಮ ಇತ್ತೀಚಿನ ಪೋಸ್ಟ್ ನಲ್ಲಿ ಇರಾನ್ ಸರ್ಕಾರದ ಆಂತರಿಕ ಬಿಕ್ಕಟ್ಟಿನ ಬಗ್ಗೆ ನೇರವಾಗಿಯೇ ಪ್ರಸ್ತಾಪಿಸಿದ್ದಾರೆ.
ವಿಭಜಿತ ಇರಾನ್: “ಇರಾನ್ ಸರ್ಕಾರವು ಸದ್ಯ ಗಂಭೀರವಾಗಿ ವಿಭಜನೆಗೊಂಡಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನದ ಮನವಿ: ಪಾಕ್ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯಂತೆ, ಇರಾನ್ ಕಡೆಯಿಂದ ಒಂದು ಸರ್ವಾನುಮತದ ಪ್ರಸ್ತಾವನೆ ಬರುವವರೆಗೆ ದಾಳಿ ನಡೆಸದಂತೆ ನಿರ್ಧರಿಸಲಾಗಿದೆ.
ಸೇನಾ ಸನ್ನದ್ಧತೆ: ಯುದ್ಧವಿರಾಮ ಘೋಷಿಸಿದರೂ, ಇರಾನ್ ಮೇಲಿನ ದಿಗ್ಬಂಧನ ಮುಂದುವರಿಯಲಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅಮೆರಿಕ ಸೇನೆ ಸಜ್ಜಾಗಿರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸದ್ಯಕ್ಕೆ ತಪ್ಪಿದ ಭೀತಿ:
ಈ ಘೋಷಣೆಯಿಂದಾಗಿ ಸದ್ಯಕ್ಕೆ ಮರು ಯುದ್ಧದ ಆತಂಕ ದೂರವಾಗಿದೆ. ಆದರೆ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಮಾತುಕತೆಗಾಗಿ ನಡೆಸಬೇಕಿದ್ದ ಪಾಕಿಸ್ತಾನ ಪ್ರವಾಸವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಅಲ್ಲದೆ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಅಮೆರಿಕ ವಿಧಿಸಿರುವ ದಿಗ್ಬಂಧನ ಯಥಾಸ್ಥಿತಿಯಲ್ಲಿದೆ.
ಪಾಕಿಸ್ತಾನದ ಪ್ರತಿಕ್ರಿಯೆ:
ತಮ್ಮ ಮನವಿಯನ್ನು ಪುರಸ್ಕರಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಧನ್ಯವಾದ ಅರ್ಪಿಸಿದ್ದಾರೆ. ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಈ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಕಿಸ್ತಾನ ಪ್ರಯತ್ನ ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಎರಡನೇ ಹಂತದ ಯುದ್ಧವಿರಾಮ ವಿಸ್ತರಣೆಯಾಗಿದ್ದು, ಇರಾನ್ ನೀಡಲಿರುವ ಮುಂದಿನ ಪ್ರಸ್ತಾವನೆಯ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. (ಏಜೆನ್ಸಿಸ್)



